ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಂದರೆ ಆಗದಂತೆ ಪಾಸ್ ವಿತರಿಸಿ: ಶಾಸಕ ವೆಂಕಟರಾವ್ ನಾಡಗೌಡ

ಗೊಬ್ಬರ ವ್ಯಾಪಾರಿಗಳು, ಗಂಜ್ ವರ್ತಕರ ಸಭೆಯಲ್ಲಿ ಶಾಸಕ ಸೂಚನೆ
Last Updated 13 ಮೇ 2021, 4:47 IST
ಅಕ್ಷರ ಗಾತ್ರ

ಸಿಂಧನೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ರಸಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳ ಮಾಲೀಕರು ಮತ್ತು ಎಪಿಎಂಸಿ ಗಂಜ್ ವರ್ತಕರಿಗೆ ಪಾಸ್ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ರಸಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳ ವ್ಯಾಪಾರಿಗಳು, ಗಂಜ್ ವರ್ತಕರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರಕ್ಕೆ ಬರುವ ರೈತರ ಮತ್ತು ವ್ಯಾಪಾರಸ್ಥರ ವಾಹನಗಳನ್ನು ಪೊಲೀಸರು ಹಿಡಿದು ದಂಡ ಹಾಕುತ್ತಿರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟದ ಅಂಗಡಿಗಳಿಗೆ ಕೃಷಿ ಇಲಾಖೆಯಿಂದ ತಲಾ ಒಂದು ಪಾಸ್, ಎಪಿಎಂಸಿ ಕಾರ್ಯದರ್ಶಿಗಳಿಂದ ವರ್ತಕರಿಗೆ ತಲಾ ಎರಡು ಪಾಸ್ ವಿತರಿಸುವ ವ್ಯವಸ್ಥೆ ಆಗಬೇಕು. ವರ್ತಕರು ಭತ್ತ ಖರೀದಿಸಿದ ನಂತರ ರೈತರಿಗೆ ಅಂಗಡಿಯ ಮುದ್ರೆ ಹಾಕಿ ಖರೀದಿ ರಶೀದಿ ಕೊಡಬೇಕು. ಅದನ್ನು ರಸ್ತೆಗಳಲ್ಲಿ ವಾಹನ ಹಿಡಿಯುವ ಪೊಲೀಸರಿಗೆ ತೋರಿಸಿದರೆ, ದಂಡ ಹಾಕುವುದು ತಪ್ಪುತ್ತದೆ. ತಕ್ಷಣ ಈ ವ್ಯವಸ್ಥೆ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಹೋಮ್ ಐಸೋಲೇಶನ್‍ನಲ್ಲಿರುವ ಕೋವಿಡ್ ಸೋಂಕಿತರನ್ನು ನಗರದ ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಐದು ಸರ್ಕಾರಿ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ತಮ್ಮ ಗಮನಕ್ಕಿಲ್ಲದೆ ಒಂದೇ ದಿನದಲ್ಲಿಯೇ ಸರ್ಕಾರಿ ಬಸ್‍ಗಳನ್ನು ರದ್ದುಗೊಳಿಸಿ ಬಾಡಿಗೆ ರೂಪದಲ್ಲಿ ಕ್ರೂಸರ್ ವಾಹನ ಮಾಡಿರುವುದು ಏಕೆ. ಹಾಗಾದರೆ ಟಾಸ್ಕ್‌ಫೋರ್ಸ್‌ ಸಮಿತಿ ಕೈಗೊಂಡ ನಿರ್ಧಾರಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಈ ಚಟುವಟಿಕೆಯಲ್ಲಿ ವ್ಯವಹಾರ ಮಾಡುವ ಉದ್ದೇಶದಿಂದಲೇ ಕ್ರೂಸರ್ ವಾಹನ ಬಾಡಿಗೆ ಮಾಡಿದ್ದೀರಿ’ ಎಂದು ಆರೋಪಿಸಿ ಲಿಂಗಸುಗೂರು ಉಪವಿಭಾಗಾಧಿಕಾರಿ ರಾಜಶೇಖರ ಡಂಬಳ ಅವರನ್ನು ಶಾಸಕರು ತರಾಟೆ ತೆಗೆದುಕೊಂಡರು.

ತಹಶೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ, ಡಿವೈಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ, ಕೋವಿಡ್ ನೋಡಲ್ ಅಧಿಕಾರಿ ಡಾ.ಜೀವನೇಶ್ವರಯ್ಯ, ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮರೇಗೌಡ ವಿರುಪಾಪುರ, ಬಸವರಾಜ ಹಿರೇಗೌಡರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಟಿ.ನಂದಿಬೇವೂರು, ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಪೂಜಪ್ಪ ಪೂಜಾರಿ, ರಸಗೊಬ್ಬರ ಮತ್ತು ಕ್ರಿಮಿನಾಶಕ ವ್ಯಾಪಾರಿಗಳ ಅಧ್ಯಕ್ಷ ಸಣ್ಣಭೀಮನಗೌಡ ಗೊರೇಬಾಳ, ಸಬ್‍ಇನ್‌ಸ್ಪೆಕ್ಟರ್‌ ವಿಜಯಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT