ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಅಭಿವೃದ್ಧಿಗೆ ದೈವ ಸಂಕಲ್ಪ ಯೋಜನೆ- ಸಚಿವೆ ಶಶಿಕಲಾ ಜೊಲ್ಲೆ

ಅಂಬಾದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
Last Updated 21 ಫೆಬ್ರುವರಿ 2022, 4:28 IST
ಅಕ್ಷರ ಗಾತ್ರ

ಸಿಂಧನೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಕನಸನ್ನು ರಾಜ್ಯದಲ್ಲೂ ನನಸು ಮಾಡುವ ನಿಟ್ಟಿನಲ್ಲಿ ನೂತನವಾಗಿ ‘ದೈವ ಸಂಕಲ್ಪ’ ಯೋಜನೆಯನ್ನು ಮುಜರಾಯಿ ಇಲಾಖೆಯಿಂದ ಪ್ರಾರಂಭಿಸಲಾಗಿದ್ದು, ಮೊದಲ ಹಂತವಾಗಿ ರಾಜ್ಯದ 25 ದೇವಸ್ಥಾನಗಳನ್ನು ಆಯ್ಕೆ ಮಾಡಿ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ’ ಎಂದು ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಅಂಬಾಮಠದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಧಾರ್ಮಿಕ ಸಂಸ್ಥೆಗಳ ಜೀರ್ಣೋದ್ಧಾರ ಅನುದಾನದಡಿ ₹ 7.93 ಕೋಟಿ ವೆಚ್ಚದಲ್ಲಿ ಅಂಬಾದೇವಿ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನ ಅರ್ಚಕರ ಆರೋಗ್ಯ ಹಿತದೃಷ್ಠಿಯಿಂದ ಜೀವವಿಮೆ ಮತ್ತು 6ನೇ ವೇತನವನ್ನು ನವೆಂಬರ್ ತಿಂಗಳಿನಿಂದ ಜಾರಿ ಮಾಡಲಾಗಿದೆ. ಅರ್ಚಕರಿಗೆ ನೀಡುತ್ತಿದ್ದ ತಸ್ತಿಕ್ ₹ 4 ಸಾವಿರ ವೇತನವನ್ನು ಬರುವ ಬಜೆಟ್‍ನಲ್ಲಿ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ದೇವಸ್ಥಾನಗಳ ಸಂಪೂರ್ಣ ಮಾಹಿತಿಗಾಗಿ ಐಟಿಎಂಎಸ್ ವೆಬ್‍ಸೈಟ್ ತೆರೆಯಲಾಗುವುದು. ರಾಜ್ಯದಲ್ಲಿ 34217 ಸಿ ದರ್ಜೆಯ ದೇವಸ್ಥಾನಗಳಿದ್ದು, ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಜೂನ್ ತಿಂಗಳಲ್ಲಿ ಸಿಂಧನೂರಿಗೆ ರೈಲ್ವೆ ಸಂಚಾರ ಆರಂಭಗೊಳ್ಳಲಿದೆ. ಸಿಂಧನೂರು-ಮಸ್ಕಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದಾರೆ. ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಏಳುರಾಗಿ ಕ್ಯಾಂಪಿನಲ್ಲಿ ನಿರ್ಮಿಸಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲದೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಮಾರ್ಚ್ 4ರ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಹಣ ಕಾಯ್ದಿರಿಸಿ ಕಾಮಗಾರಿ ಆರಂಭಿಸಲಿದ್ದಾರೆಂಬ ವಿಶ್ವಾಸವಿದೆ’ ಎಂದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ₹ 7.93 ಕೋಟಿ ವೆಚ್ಚದಲ್ಲಿ ಅಂಬಾದೇವಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನ ಹುಂಡಿಯಲ್ಲಿ ಈಗಾಗಲೇ ₹ 4 ಕೋಟಿ ಸಂಗ್ರಹವಾಗಿದೆ. ಇನ್ನುಳಿದ ಹಣ ಭಕ್ತರಿಂದ ಸಂಗ್ರಹಿಸಬೇಕಿದೆ. ಮೊದಲ ಹಂತವಾಗಿ ₹ 3 ಕೋಟಿ ಮಂಜೂರಿಗೆ ಅನುಮತಿ ನೀಡಿದ್ದು ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅಂದಾಜು ₹ 30 ಕೋಟಿ ವೆಚ್ಚದಲ್ಲಿ ಅಂಬಾದೇವಿ ದೇವಸ್ಥಾನದ ಜೀಣೋದ್ಧಾರ ಸೇರಿದಂತೆ ಪ್ರವಾಸಿ ತಾಣವಾಗಿಸುವ ಮಾಸ್ಟರ್ ಪ್ಲಾನ್ ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಕುರಿತು ದಾಖಲೆಯನ್ನು ಸಚಿವೆ
ಶಶಿಕಲಾ ಜೊಲ್ಲೆ ಅವರಿಗೆ ಸಲ್ಲಿಸಿ ಗಮನ ಸೆಳೆದರು.

ಕರಿಬಸವನಗರ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ, ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು, ಕಂಬಾಳಿಮಠದ ಕುಮಾರಸ್ವಾಮಿ, ಅಂಬಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಗುರುದತ್ತ ಮಹಾರಾಜರು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಅಪರ ಜಿಲ್ಲಾಧಿಕಾರಿ ದುರುಗೇಶ ಆರ್, ಲಿಂಗಸುಗೂರು ಸಹಾಯಕ ಆಯುಕ್ತ ರಾಹುಲ್ ಎಸ್.ಸಂಕನೂರು, ತಹಶೀಲ್ದಾರ್ ಮಂಜುನಾಥ ಭೋಗಾವತಿ ಇದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯಿಂದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT