ಮುಚ್ಚಿದ ಕಚೇರಿಗಳ ಬಾಗಿಲು: ಜನರ ಪರದಾಟ

7
ಮಸ್ಕಿ ತಾಲ್ಲೂಕು ಕೇಂದ್ರಕ್ಕೆ ಆರು ತಿಂಗಳು

ಮುಚ್ಚಿದ ಕಚೇರಿಗಳ ಬಾಗಿಲು: ಜನರ ಪರದಾಟ

Published:
Updated:
ಆರು ತಿಂಗಳಿನಿಂದ ಮುಚ್ಚಿರುವ ಮಸ್ಕಿಯ ನೂತನ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಚೇರಿ

ಮಸ್ಕಿ: ಮೂರು ದಶಕಗಳ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಮಸ್ಕಿ ತಾಲ್ಲೂಕಿನ ತಾಲ್ಲೂಕು ಕಚೇರಿಗಳ ಬಾಗಿಲು ಮುಚ್ಚಿದ್ದು ತಾಲ್ಲೂಕಿನ ಕನಸು ಕಂಡಿದ್ದ ಜನತೆಗೆ ನಿರಾಸೆ ಉಂಟು ಮಾಡಿದೆ.

ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಸ್ಕಿ ಸೇರಿದಂತೆ ರಾಜ್ಯದಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸಿ ಜನವರಿ 26, 2018 ರಿಂದಲೇ ಕಾರ್ಯಾರಂಭ ಮಾಡುವಂತೆ ಸರ್ಕಾರಿ ಸುತ್ತೋಲೆ ಹೊರಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕು ಕೇಂದ್ರವನ್ನು ಉದ್ಘಾಟಿಸಿದ್ದರು.

ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ತಾಲ್ಲೂಕು ಆಡಳಿತ ಕೇಂದ್ರದ 38 ವಿವಿಧ ಇಲಾಖೆಗಳ ಕಚೇರಿಗಳನ್ನು ಪಟ್ಟಣದ ನೀರಾವರಿ ಇಲಾಖೆಗೆ ಸೇರಿದ ಕಟ್ಟಡ, ವಾಲ್ಮೀಕಿ ಭವನ, ಸಾಮರ್ಥ್ಯಸೌಧ ಸೇರಿದಂತೆ ವಿವಿಧ ಕಡೆ ಆರಂಭಿಸಲಾಗಿತ್ತು.

ತಾಲ್ಲೂಕು ಕಚೇರಿಗಳ ನಾಮಫಲ ಹಾಕಿ ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕಿನ ಅಧಿಕಾರಿಗಳನ್ನು ಎರವಲು ಸೇವೆ ಮೇಲೆ ನೂತನ ಮಸ್ಕಿ ತಾಲ್ಲೂಕಿಗೆ ವರ್ಗಾಯಿಸಿ ಜಿಲ್ಲಾಧಿಕಾರಿ ಡಾ.ಗೌತಮ್ ಬುಗಾದಿ ಆದೇಶಿದ್ದರು.

ಕೆಲವು ದಿನ: ನೂತನವಾಗಿ ಅಸ್ತಿತ್ವಕ್ಕೆ ಬಂದ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಆಡಳಿತ ಕಚೇರಿ ಕಾರ್ಯಾರಂಭಿಸಿದ್ದವು. ತಾಲ್ಲೂಕು ಕೇಂದ್ರಕ್ಕೆ ಬೇಕಾದ ಕಂದಾಯ ಇಲಾಖೆ ಭೂ ದಾಖಲೆ ವರ್ಗಾವಣೆ, ಉಪ ಖಜಾನೆ ಕೋಡ್ ಸಂಖ್ಯೆ, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಇಲ್ಲದ ಕಾರಣ ಸರ್ಕಾರ ಇದುವರೆಗೂ ತಾಲ್ಲೂಕು ಕೇಂದ್ರಕ್ಕೆ ಬೇಕಾದ ಅನುದಾನ, ಇಲಾಖೆಯ ಕೋಡ್ ಜತೆಗೆ ಖಜಾನೆಯ ಖಾತೆ ನಂಬರ್ ನೂತನ ತಾಲ್ಲೂಕು ಕೇಂದ್ರಕ್ಕೆ ನೀಡದ ಕಾರಣ ನಿಯೋಜನೆಗೊಂಡಿದ್ದ ಅಧಿಕಾರಿಗಳು ಕೆಲಸ ಮಾಡಲು ಆಗದೆ ಕಚೇರಿಗಳಿಗೆ ಬೀಗ ಜಡಿದು ತಮ್ಮ  ಮೂಲ ಕೇಂದ್ರ ಸ್ಥಾನಗಳಿಗೆ ತೆರಳಿದ್ದಾರೆ.

ಜನವರಿಯಿಂದಲೇ ಮಸ್ಕಿ ತಾಲ್ಲೂಕು ಕೇಂದ್ರವಾಗುತ್ತದೆ. ನಮ್ಮ ಕೆಲಸಗಳು ಬೇಗ ಆಗುತ್ತವೆ, ದೂರದ ತಾಲ್ಲೂಕು ಕೇಂದ್ರಗಳಿಗೆ ಹೋಗುವ ಗೋಳು ತಪ್ಪುತ್ತದೆ ಎಂದು ಅಂದುಕೊಂಡಿದ್ದ ಮಸ್ಕಿ ತಾಲ್ಲೂಕಿಗೆ ಒಳಪಡುವ ಮಾನ್ವಿ, ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕಿನ 120 ಕ್ಕೂ ಹೆಚ್ಚು ಹಳ್ಳಿಗರ ಕನಸು ಕನಸಾಗಿಯೇ ಉಳಿದಿದೆ.

ಮಸ್ಕಿ ತಾಲ್ಲೂಕು ಕೇಂದ್ರವಾಗಿ ಆರು ತಿಂಗಳು ಕಳೆದರೂ ಸಹ ಈ ತಾಲ್ಲೂಕಿಗೆ ಒಳಪಡುವ ಮೂರು ತಾಲ್ಲೂಕುಗಳ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಹಳೆಯ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಿಲ್ಲ.

ಸರ್ಕಾರಿ ಜಯಂತಿಗೆ ಅನುದಾನ ಇಲ್ಲಾ: ತಾಲ್ಲೂಕು ಕೇಂದ್ರವಾದ ಕೂಡಲೇ ಸರ್ಕಾರ, ಸರ್ಕಾರಿ ಜಯಂತಿಗಳನ್ನು ಆಚರಿಸಲು ತಾಲ್ಲೂಕು ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಆದರೆ, ಇವತ್ತಿಗೂ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ.

 ತಾಲ್ಲೂಕು ಕಚೇರಿಗಳ ಕಾರ್ಯನಿರ್ವಹಣೆ ಸಂಬಂಧ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ಜೊತೆ ಚರ್ಚಿಸಲಾಗಿದ್ದು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ
- ಪ್ರತಾಪಗೌಡ ಪಾಟೀಲ, ಶಾಸಕರು, ಮಸ್ಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !