ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸಕ್ತರಿಗೆ ಮುದನೀಡಿದ ಚಿತ್ರಸಂತೆ

ದಿ.ಶಂಕರಗೌಡ ಬೆಟ್ಟದೂರು ಹೆಸರಿನಲ್ಲಿ ಆರ್ಟ್‌ ಗ್ಯಾಲರಿ ಸ್ಥಾಪನೆ; ಭರವಸೆ
Last Updated 17 ಫೆಬ್ರುವರಿ 2020, 5:42 IST
ಅಕ್ಷರ ಗಾತ್ರ

ರಾಯಚೂರು: ಇಷ್ಟವಾಗಿದ್ದನ್ನು ಮೊಬೈಲ್‌ನಲ್ಲೇ ವೀಕ್ಷಿಸುವುದಕ್ಕೆ ಸಾಧ್ಯವಿದ್ದರೂ ಪ್ರತ್ಯೇಕ್ಷವಾಗಿ ಚಿತ್ರಕಲಾಕೃತಿಗಳನ್ನು ಕಣ್ಮುಂಬಿಕೊಳ್ಳುವುದಕ್ಕಾಗಿ ನಗರದಲ್ಲಿ ಭಾನುವಾರ ನಡೆದ ‘ಚಿತ್ರಸಂತೆ’ಗೆ ಅನೇಕ ಜನರು ಭೇಟಿ ನೀಡಿದರು.

ವೈವಿಧ್ಯಮಯ ಬಣ್ಣಗಳೊಂದಿಗೆ ಭಾವನೆಗಳನ್ನು ಬೆರೆಸಿ ಚಿತ್ರಸಿದ್ದ ಕಲಾವಿದರು, ತಮ್ಮ ಕಲಾಕೃತಿಗಳನ್ನು ಜನರಿಗಾಗಿ ತೆರೆದಿಟ್ಟಿದ್ದರು. ಪ್ರದರ್ಶನ ಹಾಗೂ ಮಾರಾಟ ಎರಡೂ ಎತ್ತು. ಆಯಿಲ್‌ ಪೇಟಿಂಗ್‌, ವಾಟರ್‌ ಪೇಂಟಿಂಗ್‌, ಪೆನ್ಸಿಲ್‌ ಚಿತ್ರ, ಪೋರ್ಟ್ರೇಟ್‌, ಕ್ರಿಯೇಟಿವ್‌ ಪೇಂಟಿಂಗ್‌ ಸೇರಿದಂತೆ ಕಲಾವಿದರು ತಮ್ಮ ಕ್ರಿಯಾಶೀಲತೆ ಬಳಸಿ ಹೊರತಂದಿದ್ದ ಬಳಕಷ್ಟು ಕಲಾಕೃತಿಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು.

ಚಿತ್ರಕಲಾಕೃತಿ ಇಷ್ಟವಾಗಿದ್ದನ್ನು ಮೊಬೈಲ್‌ನಲ್ಲೇ ಸೆರೆಹಿಡಿದುಕೊಂಡು ಹೋದವರು ಬಹಳಷ್ಟು ಜನರು. ಆದರೆ, ಕೈಯಿಂದ ಬರೆದ ಕಲಾಕೃತಿಯು ಹೊಮ್ಮಿಸುವ ಭಾವನೆಗಳು ನಮ್ಮೊಂದಿಗೆ ಇರಬೇಕು ಎಂದು ಕಲಾಕೃತಿ ಖರೀದಿಸಿದವರು ಬೆರೆಣಿಕೆಯಷ್ಟು. ಕಲಾವಿದರ ಎದುರು ಕುಳಿತು ತಮ್ಮದೇ ಚಿತ್ರ ಬರೆಸಿಕೊಂಡು ಹೋದವರು ಸಾಕಷ್ಟಿದ್ದರು. ಮೊಬೈಲ್‌ನಲ್ಲಿ ಸೆರೆಹಿಡಿದು ತಂದಿದ್ದ ಚಿತ್ರವನ್ನು ಕಲಾವಿದರ ಕೈಗೆ ಕೊಟ್ಟು, ಅದರ ಚಿತ್ರಕಲಾಕೃತಿ ಮಾಡಿಸಿಕೊಳ್ಳುತ್ತಿದ್ದವರ ಸಂಭ್ರಮವೂ ಚಿತ್ರಸಂತೆಯಲ್ಲಿ ಗಮನ ಸೆಳೆಯಿತು.

ಬೆಳಗಾವಿ, ವಿಜಯಪುರ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 61 ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದರು. ಕಲಾಸಕ್ತ ಸಾಹಿತಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಬಹುತೇಕ ಬೆಳಿಗ್ಗೆಯೇ ಚಿತ್ರಸಂತೆ ವೀಕ್ಷಿಸಿದರು. ಸಂಜೆಯಾಗುತ್ತಿದ್ದಂತೆ ಚಿತ್ರಸಂತೆಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು.

ದಿ. ಶಂಕರಗೌಡ ಬೆಟ್ಟದೂರು ವೇದಿಕೆ:ನಗರದ ಸಾರ್ವಜನಿಕ ಉದ್ಯಾನದ ಎದುರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಲಾಸಂಕುಲದಿಂದ ಆಯೋಜಿಸಿದ್ದ ' ಚಿತ್ರಸಂತೆ'ಗೆ ಮಳಿಗೆಗಳ ವೇದಿಕೆಗೆ ದಿ.ಶಂಕರಗೌಡ ಬೆಟ್ಟದೂರು ಅವರ ಹೆಸರಿಡಲಾಗಿತ್ತು.

ಸಂಸದ ರಾಜಾ ಅಮರೇಶ್ವರ ನಾಯಕ ಅವರು ಚಿತ್ರಸಂತೆಯನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಮಳಿಗೆಗಳನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗೀರ್‌ಸಾಬ್‌ ದಿನ್ನಿ, ಮುಖಂಡ ರವೀಂದ್ರ ಜಲ್ದಾರ, ಲಲಿತಕಲಾ ಅಕಾಡೆಮಿ ಸದಸ್ಯ ಹನೀಷ ಫಾತಿಮಾ, ಚಿತ್ರಕಲಾವಿದರಾದ ಚಾಂದಪಾಷಾ, ಈಶ್ವರ, ಅಮರೇಗೌಡ, ಶಶಿ ಹಿರೇಮಠ, ಈರಣ್ಣ ಬೆಂಗಾಲಿ, ದೇವರಾಜ ಕುರ್ಡಿ, ಕೆ.ಲಕ್ಷ್ಮೀಪತಿ ಯರಗೇರಾ, ರವಿ ರಾಂಪೂರ, ವೀರೇಶ ಮೇದಾರ ಇದ್ದರು.

ಕಲಾಸಂಕುಲ ಸಂಸ್ಥೆಯು ಚಿತ್ರಸಂತೆಯನ್ನು ಆಯೋಜಿಸಿದ್ದು ಇದು ಎರಡನೇ ಬಾರಿ. ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಚಿತ್ರಸಂತೆ ನೇತೃತ್ವ ವಹಿಸಿದ್ದರು.

‘ಶಂಕರಗೌಡ ಬೆಟ್ಟದೂರು ಅವರ ಹೆಸರಿನಲ್ಲಿ ರಾಯಚೂರಿನಲ್ಲಿ ಒಂದು ಆರ್ಟ್‌ ಗ್ಯಾಲರಿ ಮಾಡಲಾಗುವುದು’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಇದೇ ವೇಳೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT