ಬುಧವಾರ, ಫೆಬ್ರವರಿ 24, 2021
24 °C
ಜಿಲ್ಲಾಡಳಿತದಿಂದ ಶಿಕ್ಷಕರ ದಿನಾಚರಣೆ, ಸಚಿವರಿಂದ 19 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಸಂಸ್ಕಾರವಿಲ್ಲದವರ ಬಳಿ ವಿದ್ಯೆಯೂ ಅಪಾಯಕಾರಿ; ವೆಂಕಟರಾವ್‌ ನಾಡಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ‘ಸಂಸ್ಕಾರ ಇಲ್ಲದವರ ಹತ್ತಿರ ಅಧಿಕಾರ, ವಿದ್ಯೆ ಹಾಗೂ ಹಣವಿದ್ದರೂ ಅಪಾಯಕಾರಿ ಎಂದು ಅನುಭವಿಗಳು ಹೇಳಿದ್ದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರವನ್ನೂ ಕಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ನಗರದ ಡಾ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರಸಭೆಯಿಂದ ಬುಧವಾರ ಏರ್ಪಡಿಸಿದ್ದ ‘ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಉದ್ಘಾಟಿಸಿ ಮಾತನಾಡಿದರು.

‘ಕಿಡ್ನಿ ಕದಿಯುವ ವೈದ್ಯರಿದ್ದಾರೆ ಹಾಗೂ ಬಾಂಬ್‌ ಸ್ಫೋಟ ನಡೆಸುವ ಎಂಜಿನಿಯರ್‌ ಇದ್ದಾರೆ ಎಂದರೆ; ಅವರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತದೆ. ವಿದ್ಯೆಯನ್ನು ಯಾವುದಕ್ಕೆ ಬಳಕೆ ಮಾಡಬೇಕು ಎನ್ನುವ ಸಂಸ್ಕಾರವನ್ನು ಶಿಕ್ಷಕರು ನೀಡಿರಿರುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ನೀಡುವ ಸಂಸ್ಕಾರವು ವಿದ್ಯಾರ್ಥಿಗಳ ಬದುಕು ರೂಪಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಯಾರು ಮಾದರಿ ಎನ್ನುವ ಪ್ರಶ್ನೆಗೆ ಈಗ ವ್ಯತೀರಿಕ್ತವಾದ ಉತ್ತರ ದೊರೆಯುತ್ತದೆ. ಮಕ್ಕಳನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ ಎಂದರು.

ಶಿಕ್ಷಣ ಕಡ್ಡಾಯ ಎನ್ನುವ ಘೋಷಣೆ ಇಲ್ಲಿಯವರೆಗೂ ಇತ್ತು. ಈಗ ಗುಣಮಟ್ಟದ ಶಿಕ್ಷಣ ಕಡ್ಡಾಯ ಎನ್ನುವುದು ಚಾಲ್ತಿ ಇದೆ. ಶಿಕ್ಷಕರು ಬದಲಾಗಬೇಕು. ನಾಡಿನ ಶ್ರೇಷ್ಠ ಶಿಕ್ಷಕ ಎಂದು ಕರೆಯುವ ಡಾ. ಎಸ್‌. ರಾಧಾಕೃಷ್ಣನ್‌ ಅವರು ರಾಷ್ಟ್ರಪತಿಯಾಗಿದ್ದರು. ಆದರೆ, ಅವರು ಶಿಕ್ಷಕರಾಗಿದ್ದರು ಎಂಬುದನ್ನು ಗುರುತಿಸಲಾಗಿದೆ. ರಾಷ್ಟ್ರಪತಿ ಹುದ್ದೆಗಿಂತಲೂ ಶಿಕ್ಷಕರ ಜವಾಬ್ದಾರಿ ಶ್ರೇಷ್ಠ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರು ಮಾತನಾಡಿ, ರಾಯಚೂರು ಜಿಲ್ಲೆಯು ಕೇಂದ್ರದ ಮಹತ್ವಾಕಾಂಕ್ಷಿ (ಆಸ್ಪರೇಷನ್‌) ಜಿಲ್ಲೆ ಎಂದು ಆಯ್ಕೆಯಾಗಿದೆ. ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ಪಡೆಯುವಂತೆ ಶಿಕ್ಷಕರು ತರಬೇತಿ ನೀಡಬೇಕಿದೆ. ಗುಣಮಟ್ಟದ ಶಿಕ್ಷಣ ನೀಡುವ ಸವಾಲು ಇದ್ದು, ಅದರನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.

ಇರಕಲ್‌ ಶಕ್ತಪೀಠದ ಬಸವ ಪ್ರಸಾದ ಶರಣರು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.
2018–19ನೇ ಸಾಲಿನಲ್ಲಿ 14 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ಐದು ಶಿಕ್ಷಕರಿಗೆ ನೀಡಿ ಗೌರವಿಸಲಾಯಿತು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಡೆದವರು: ದೇವದುರ್ಗ ಸಪ್ತಗಿರಿ ಕಾಲೋನಿ ಶಾಲೆಯ ಆಶಾ ಬಿ., ಲಿಂಗಸುಗೂರು ತಾಲ್ಲೂಕು ಮಿಂಚೇರಿ ತಾಂಡಾ-1 ಶಾಲೆಯ ಸಂಗಯ್ಯ, ಮಾನ್ವಿ ತಾಲ್ಲೂಕಿನ ನೀರಮಾನ್ವಿ ಕ್ಯಾಂಪ್ ಶಾಲೆಯ ಲಕ್ಷ್ಮೀದೇವಿ, ಸಿಂಧನೂರು ತಾಲ್ಲೂಕು ಭೂತಲದಿನ್ನಿಯ ವಿಶ್ವನಾಥ ಎಸ್., ಸಿಂಧನೂರು ತಾಲ್ಲೂಕು ಕೆ.ಹಂಚಿನಾಳ ಶಾಲೆಯ
ಕರಿವೀರಪ್ಪ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರು: ದೇವದುರ್ಗ ತಾಲ್ಲೂಕು ಸಮುದ್ರ ಶಾಲೆಯ ಜಾನವೆಸ್ಲಿ, ಲಿಂಗಸುಗೂರು ತಾಲ್ಲೂಕು ಚಿತ್ತಾಪುರ ಶಾಲೆಯ ಸದಾಶಿವ ಎಂ.ಗೊಂಧಳೆ, ಮಾನ್ವಿ ತಾಲ್ಲೂಕು ರಾಜೋಳ್ಳಿ ಶಾಲೆಯ ಹನುಮಂತಪ್ಪ, ರಾಯಚೂರು ತಾಲ್ಲೂಕು ತುಂಟಾಪುರ ಶಾಲೆಯ ವಿಜಯಲಕ್ಷ್ಮಿ,

ಪ್ರೌಢಶಾಲಾ ವಿಭಾಗದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದವರು: ದೇವದುರ್ಗ ತಾಲ್ಲೂಕು ಸುಂಕೇಶ್ವರಹಾಳ ಶಾಲೆಯ ಮಲ್ಲಿಕಾರ್ಜುನ ಬೆನಕಟ್ಟಿ, ಲಿಂಗಸುಗೂರು ತಾಲ್ಲೂಕು ತಲೇಖಾನ್ ಗ್ರಾಮದ ಶಾಲೆಯ ನಾಗರಾಜ ಪಾಟೀಲ, ಮಾನ್ಬಿ ತಾಲ್ಲೂಕು ಮಾಡಗಿರಿ ಶಾಲೆಯ ಪ್ರಭುಲಿಂಗ್ ಹಿಡಕಲ್, ರಾಯಚೂರು ತಾಲ್ಲೂಕು ಡಿ.ರಾಂಪುರ ಶಾಲೆಯ ಶರಣಪ್ಪ, ಸಿಂಧನೂರು ತಾಲ್ಲೂಕು ಸುಕಾಲಪೇಟ ಶಾಲೆಯ ಭಾರತೀಶ.

ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪಡೆದವರು: ಭಾಜನರಾದವರು: ರಾಯಚೂರು ತಾಲ್ಲೂಕು ಪುಚ್ಚಲದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಘವೇಂದ್ರ, ಮಟಮಾರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಇ.ಇಸ್ಮಾಯಿಲ್, ಸಿಂಧನೂರು ತಾಲ್ಲೂಕು ಸುಕಾಲಪೇಟೆ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಅನೀಸ್ ಫಾತಿಮಾ, ರಾಯಚೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮೈಮುನ್ನಿಸಾ.

ಸಂಸದ ಬಿ.ವಿ. ನಾಯಕ, ಶಾಸಕರಾದ ಬಸನಗೌಡ ದದ್ದಲ, ರಾಜಾವೆಂಕಟಪ್ಪ ನಾಯಕ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌, ಪೌರಾಯುಕ್ತ ರಮೇಶ ನಾಯಕ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು