ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಈದ್ ಉಲ್ ಫಿತ್ರ್ ಖರೀದಿ ಜೋರು

ಬಾವಾಸಲಿ
Published 11 ಏಪ್ರಿಲ್ 2024, 5:47 IST
Last Updated 11 ಏಪ್ರಿಲ್ 2024, 5:47 IST
ಅಕ್ಷರ ಗಾತ್ರ

ರಾಯಚೂರು: ಈದ್‌ ಉಲ್‌ ಫಿತ್ರ್‌ ಆಚರಣೆಯ ಮುನ್ನಾದಿನ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯಿತು.

ಸಂಜೆ ಆರಂಭವಾದ‌ ಖರೀದಿ ತಡರಾತ್ರಿವರೆಗೂ ನಡೆಯಿತು. ಮಾರುಕಟ್ಟೆಯಲ್ಲಿ ಮುಸ್ಲಿಮರು ಸೇರಿ ಅನ್ಯ ಧರ್ಮೀಯರು ವಿವಿಧ ವಸ್ತುಗಳನ್ನು ಖರೀದಿಸಿದರು.

ಮಾರುಕಟ್ಟೆಯಲ್ಲಿ ಭಾರಿ ಜನಜಂಗುಳಿ ಕಂಡು ಬಂದಿತು. ಕುಟುಂಬ ಸಮೇತ ಬಂದಿದ್ದ ಮುಸ್ಲಿಮರು ತಮ್ಮ ನೆಚ್ಚಿನ ಬಟ್ಟೆ, ಅಲಂಕಾರಿಕ ವಸ್ತುಗಳನ್ನು ಚೌಕಾಸಿ ಮಾಡಿ ಖರೀದಿಸಿದರು.

ಭಗತ್‌ಸಿಂಗ್‌ ವೃತ್ತದಿಂದ ತೀನ್‌ ಕಂದಿಲ್‌ ವೃತ್ತ, ಬಟ್ಟೆ ಬಜಾರ್‌, ಭಾಂಡೆ ಬಜಾರ್‌, ಸರಾಫ್‌ ಬಜಾರ್‌, ಲೋಹರ್‌ ವಾಡಿ ಮಾರ್ಗಗಳಲ್ಲಿರುವ ಮಳಿಗೆಗಳಲ್ಲಿ ಮಾರಾಟ ಭರಾಟೆ ನಡೆಯಿತು. ರಣ ಬಿಸಿಲಿನಿಂದಾಗಿ ಅನೇಕರು ಸಂಜೆ 5ರ ನಂತರ‌ ಮಾರುಕಟ್ಟೆಗೆ ಬಂದು ಹಬ್ಬದ ಸಾಮಗ್ರಿ ಖರೀದಿ ಮಾಡಿದರು.

ಕೈ ಬಳೆಗಳು, ಕಿವಿಯೋಲೆಗಳು, ಸುಗಂಧದ್ರವ್ಯ, ಮಹಿಳೆಯರ ಶೃಂಗಾರದ ಸಾಮಗ್ರಿಗಳು, ಸೀರೆಗಳು, ಹೊದಿಕೆಗಳು, ಪಾದರಕ್ಷೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಮಕ್ಕಳ ಆಟಿಕೆಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆಯಿಂದಾಗಿ ಸಂಚಾರ ನಿಯಂತ್ರಿಸಲು ಪೊಲೀಸರು ಪ್ರಯಾಸ ಪಡಬೇಕಾಯಿತು.

ಒಂದು ತಿಂಗಳ ಕಾಲ ಉಪವಾಸ ಆಚರಿಸಿ ಖರೀದಿಗೆ ಆಗಮಿಸಿದ್ದೇನೆ. ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಆದರೂ ಖರೀದಿ ಅನಿವಾರ್ಯವಾಗಿದೆ ಎಂದು ಸಿಯಾತಲಾಬ್ ನಿವಾಸಿ ಮಹಮ್ಮದ್ ಇಸಾಕ್‌ ತಿಳಿಸಿದರು.

ಮುಸ್ಲಿಮರು ರಾಯಚೂರಿನ ಉಸ್ಮಾನಿಯಾ ಮಾರುಕಟ್ಟೆ ಪ್ರದೇಶದಲ್ಲಿ ಡ್ರೈಫ್ರೂಟ್ಸ್‌ ಹಾಗೂ ಸಾಂಬಾರು ಮಸಾಲೆ ಪದಾರ್ಥಗಳನ್ನು ಖರೀದಿಸಿದರು.

ಹಬ್ಬದ ದಿನ ಹಾಲು ಹಾಗೂ ಶ್ಯಾವಿಗೆ ಮಿಶ್ರಿತ ಪಾಯಸ ಶೀರ್ ಖುರ್ಮಾ (ದೂದ್ ಖುರ್ಮಾ) ಹಾಗೂ ಮಾಂಸಹಾರದ ವಿಶೇಷ ಖಾದ್ಯ ಮಾಡುತ್ತಾರೆ. ದೂದ್ ಖುರ್ಮಾಕ್ಕಾಗಿ ಬದಾಮ್, ಕಾಜು, ಗೋಡಂಬಿ, ಒಣ ಖರ್ಜೂರ, ಒಣ ದ್ರಾಕ್ಷಿ ಸೇರಿ ಇತರೆ ಒಣಹಣ್ಣು ಪದಾರ್ಥ ಹಾಗೂ ಸಾಂಬಾರು ಪದಾರ್ಥ ಖರೀದಿ ಮಾಡುವುದು ಸಾಮಾನ್ಯ. ಹೀಗಾಗಿ ನಗರದ ಉಸ್ಮಾನಿಯಾ ಮಸೀದಿ, ಕಿರಾಣಿ ಬಜಾರ್, ಚಂದ್ರಮೌಳೇಶ್ವರ ರಸ್ತೆ ಹಾಗೂ ಪಟೇಲ್ ರಸ್ತೆಯ ಹಲವು ವ್ಯಾಪಾರಿ ಮಳಿಗೆ ಹಾಗೂ ರಸ್ತೆ ಬದಿಯಲ್ಲಿ ವಿವಿಧ ಸಾಮಗ್ರಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ರಂಜಾನ್ ಹಿನ್ನೆಲೆಯಲ್ಲಿ ರಾಯಚೂರಿನ ಉಸ್ಮಾನಿಯಾ ಮಾರುಕಟ್ಟೆಯ ಸಮೀಪ ಗ್ರಾಹಕರು‌ ಡ್ರೈಫ್ರೂಟ್ಸ್‌ ಖರೀದಿ ಮಾಡಿದರು
ರಂಜಾನ್ ಹಿನ್ನೆಲೆಯಲ್ಲಿ ರಾಯಚೂರಿನ ಉಸ್ಮಾನಿಯಾ ಮಾರುಕಟ್ಟೆಯ ಸಮೀಪ ಗ್ರಾಹಕರು‌ ಡ್ರೈಫ್ರೂಟ್ಸ್‌ ಖರೀದಿ ಮಾಡಿದರು
ರಾಯಚೂರಿನಲ್ಲಿ ಮಸೀದಿಗೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ
ರಾಯಚೂರಿನಲ್ಲಿ ಮಸೀದಿಗೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT