ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಎಐಸಿಸಿ ಕಾರ್ಯದರ್ಶಿ ಎನ್ಎಸ್.ಬೋಸರಾಜು

ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ, ಅಲ್ಲಲ್ಲಿ ಸಸಿ ನೆಟ್ಟ ಜನ: ಹಸಿರೀಕರಣಕ್ಕೆ ಪಣ ತೊಟ್ಟ ಪರಿಸರ ಪ್ರೇಮಿಗಳು
Last Updated 6 ಜೂನ್ 2021, 4:37 IST
ಅಕ್ಷರ ಗಾತ್ರ

ರಾಯಚೂರು: ‘ಕೋವಿಡ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಪರಿಸರದಿಂದ ಆಮ್ಲಜನಕ ರಕ್ಷಣೆಯ ಮಹತ್ವ ತಿಳಿಸುವುದು ಅವಶ್ಯ. ಗಿಡ ಬೆಳೆಸಿ ಪೋಷಿಸುವ ಮೂಲಕ ನಮ್ಮ ಮುಂದಿನ ಪಿಳಿಗೆಗೆ ಉತ್ತಮ ವಾತಾವರಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಹಾಗೂ ತಮ್ಮ ಜನ್ಮದಿನದ ಅಂಗವಾಗಿ ನಗರದ ವಾರ್ಡ್ ಸಂಖ್ಯೆ 2 ರ ಟ್ಯಾಂಕ್ ಗಾರ್ಡನ್‌ನಲ್ಲಿ ಸಸಿ ನೆಡುವ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ನನ್ನ ಹುಟ್ಟು ಹಬ್ಬದ ದಿನದಂದು ವಿಶೇಷವಾಗಿ ಆಚರಿಸುವುದಕ್ಕಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ವಾರ್ಡ್‌ ಸದಸ್ಯ ಜಯಣ್ಣ ಮತ್ತು ಸಮುದಾಯದ ಜನರು ಸಸಿ ನೆಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ಶ್ಲಾಘನೀಯ’ ಎಂದರು.

ನಗರರಸಭೆ ಸದಸ್ಯ ಜಯಣ್ಣ ಮಾತನಾಡಿ,‌‘ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾರ್ಗದರ್ಶಕ ಎನ್.ಎಸ್.ಬೋಸರಾಜ ಅವರು ಕಳೆದ ಅನೇಕ ವರ್ಷಗಳಿಂದ ಸಸಿಗಳನ್ನು ನಡೆಸುವ, ಪೋಷಿಸುವ ಕಾರ್ಯಕ್ಕೆ ಅತ್ಯಂತ ಮಹತ್ವ ನೀಡಿದ್ದಾರೆ’ ಎಂದು ಹೇಳಿದರು.

ಧರ್ಮಗುರು, ಅರ್ಚಕ ಶ್ರೀಕಾಂತ್ ವೇಣಿ ಸೋಂಪೂರ, ಮೌಲಾನಾ ಮಹ್ಮದ್ ಅಯೂಬ್, ರೆವರೆಂಡ್ ಜಾನ್ ವೆಸ್ಲೆ ಡೆವಿಡ್‌ ಅವರು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು.

ಶಾಸಕ ಬಸನಗೌಡ ದದ್ದಲ್, ಮುಖಂಡರಾದ ರಾಮಣ್ಣ ಇರಬಗೇರಾ, ಶಾಂತಪ್ಪ, ಶಿವಮೂರ್ತಿ, ಜಯಂತರಾವ್ ಪತಂಗೆ, ಹೆಗಡೆಕಟ್ಟೆ ಹಾಗೂ ಅಮರೇಶ ಇದ್ದರು.

10 ಲಕ್ಷ ಸಸಿ ನೆಡುವ ಗುರಿ: ಜಿ.ಪಂ ಸಿಇಒ

ಶಾಖವಾದಿ (ಶಕ್ತಿನಗರ): ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 10 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಶೇಖ್ ತನ್ವೀರ್ ಆಸೀಫ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಕಾವೇರಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಹಯೋಗದಲ್ಲಿ ಶಾಖವಾದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದುರ.

ಪರಿಸರ ರಕ್ಷಿಸಿದರೆ ಮಾತ್ರ ನಾವು ಆರೋಗ್ಯವಾಗಿ ಬದುಕಲು ಸಾಧ್ಯ. ನಮ್ಮ ಮುಂದಿನ ಪೀಳಿಗೆಗೂ ಅರಣ್ಯ ಬೆಳೆಸಬೇಕು. ಗಿಡಗಳನ್ನು ಪೋಷಿಸುವುದರ ಜತೆಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಜಿಲ್ಲಾ ಯೋಜನಾ ನಿರ್ದೇಶಕ ಮಾಡೋಳಪ್ಪ , ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಮರೆಡ್ಡಿ , ಅಧಿಕಾರಿ ಆನಂದ, ಶಾಖವಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಮ್ಮಕ್ಕ, ಉಪಾಧ್ಯಕ್ಷೆ ಲಕ್ಷ್ಮೀ, ಪಿಡಿಒ ಅಣ್ಣರಾವ್, ಗ್ರಾಮ ಪಂಚಾಯಿತಿ ಸದಸ್ಯರು ,ಕಾವೇರಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಗುರುಲಿಂಗಮ್ಮ ಹಾಗೂ ಗ್ರಾಮದ ಯುವಕರು ಇದ್ದರು.

‘ತಾಲ್ಲೂಕಿನ ಐದು ಶಾಲೆಗಳು ದತ್ತು’

ಅರಕೇರಾ (ದೇವದುರ್ಗ): ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀದೇವಿ.ಆರ್.ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀದೇವಿ.ಆರ್.ನಾ
ಯಕ ಮಾತನಾಡಿ,‘ಸ್ವಾರ್ಥಕ್ಕಾಗಿ ಮರ–ಗಿಡಗಳನ್ನು ನಾಶ ಮಾಡುವುದರಿಂದ ಹಸಿರು ವಿರಳವಾಗುತ್ತ ಹೋಗುತ್ತಿದೆ. ಮಾನವ ಕುಲದ ನಾಶ ಮಾನವನಿಂದಲೇ ಎಂಬುವುದು ಯಾರು ಮರೆಯಬಾರದು. ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ’ ಎಂದರು.

ತಾಲ್ಲೂಕಿನ ಮಲ್ಲೇದೇವರಗುಡ್ಡ, ಬುಂಕಲದೊಡ್ಡಿ, ಗೂಗಲ್‌, ಮರಡಿತಾಂಡಾ ಹಾಗೂ ಮಲ್ಲಿನಾಯಕನದೊಡ್ಡಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ. ಈ ಶಾಲೆಗಳಲ್ಲಿ ತಲಾ 20 ಸಸಿ ನೆಟ್ಟು ಅವುಗಳ ಪೋಷಣೆಯ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನಾಯಕ, ಉಪಾಧ್ಯಕ್ಷೆ ಬಾಲಮ್ಮ, ಸದಸ್ಯರಾದ ಅಮರೇಶ ಚವ್ಹಾಣ, ಗೋವಿಂದಪ್ಪ, ಪಂಪನಗೌಡ, ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಗುತ್ತೇದಾರ, ಮಹೇಶಸ್ವಾಮಿ ಜಾಗಟಗಲ್, ಅಭಿಷೇಕ, ರಫಿ, ವಿಶ್ವರಾಧ್ಯ ನಾಯಕ, ಲಿಂಗಣ್ಣ ಹವಲ್ದಾರ್ ಮತ್ತು ಗ್ರಾಮಸ್ಥರು ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರರಿದ್ದರು.

ಗಿಡ–ಮರ ಬೆಳೆಸಲು ಸಲಹೆ

ಹಟ್ಟಿಚಿನ್ನದಗಣಿ: ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಶನಿವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ತಹಶೀಲ್ದಾರ್ ಚಾಮರಾಜ್ ಪಾಟೀಲ, ಸಿಪಿಐ ಮಹಾಂತೇಶ ಸಜ್ಜನ್ ಸೇರಿ ಇತರರು ಸಸಿ ನೆಟ್ಟರು. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ವಲಯ ಅರಣ್ಯಾಧಿಕಾರಿ ಚನ್ನಬಸವರಾಜ, ಉಪ ವಲಯ ಅರಣ್ಯಾಧಿಕಾರಿ ಸಂತೋಷ, ಅರಣ್ಯ ರಕ್ಷಕ ಮೌನೇಶ ಮಾಲೇರ್, ಪಿಎಸ್ಐ ಮುದ್ದುರಂಗಸ್ವಾಮಿ, ಪ.ಪಂ.ಮುಖ್ಯಾಧಿಕಾರಿ ಪ್ರವೀಣ ಬೊಗಾರ್, ತಾ.ಪಂ ಸದಸ್ಯ ಎಂ.ಲಿಂಗರಾಜ, ಮುಖಂಡರಾದ ಗುಂಡಪ್ಪಗೌಡ ಪೊ.ಪಾ ಸೇರಿ ಇತರರು ಇದ್ದರು.

ಪರಿಸರದ ಮಹತ್ವ ಸಾರಿದ ಜನ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಸಾರ್ವಜನಿಕ ಆಸ್ಪತ್ರೆ, ಶಾಲಾ ಕಾಲೇಜು, ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯ ಡಾ. ನಾಗನಗೌಡ ಪಾಟೀಲ ಬಯ್ಯಾಪುರ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.

ಅರಣ್ಯ ಇಲಾಖೆ ಉದ್ಯಾನದಲ್ಲಿ ಎಬಿವಿಪಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಮಾತೆ ನಂದಿಕೇಶ್ವರಿ ಉದ್ಘಾಟಿಸಿದರು.

ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಸೇರಿದಂತೆ ಇತರರು ಈ ವೇಳೆ ಸ್ಥಳದಲ್ಲಿ
ಇದ್ದರು.

ಕಾಂಗ್ರೆಸ್‍ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ ಸಸಿ ನೆಟ್ಟರು. ಮುಖಂಡರಾದ ಪಾಮಯ್ಯ ಮುರಾರಿ, ಗುಂಡಪ್ಪ ಸಾಹುಕಾರ, ಚೆನ್ನಬಸವ ವಿಠಲಾಪುರ ಹಾಗೂ ಪರಶುರಾಮ ನಗನೂರ ಇದ್ದರು.

ಕಾಳಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ವಿಜಯಕುಮಾರ ಹೊಸಗೌಡ್ರ ಚಾಲನೆ ನೀಡಿದರು.

ಉಪಾಧ್ಯಕ್ಷೆ ಮುದ್ದಮ್ಮ ಮಾನಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ ಬನ್ನಿಗೋಳ ಇದ್ದರು.

ಹುನಕುಂಟಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಧ್ಯಾಯ ಮಹಾಂತೇಶ ಕರಡಕಲ್ಲ ಮಕ್ಕಳ ಸಹಯೋಗದಲ್ಲಿ ಸಸಿ ನೆಟ್ಟು ಪರಿಸರದ ಜಾಗೃತಿ ಮೂಡಿಸಿದರು.

ಸಾಮಾಜಿಕ ಜವಾಬ್ದಾರಿ ಅರಿಯಿರಿ

ಮಾನ್ವಿ: ‘ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಕಾರಣ ಪ್ರತಿಯೊಬ್ಬರೂ ಮರ ಗಿಡಗಳನ್ನು ಬೆಳೆಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು’ ಎಂದು ಬ್ಯಾಗವಾಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶರಣಬಸವ ಪಾಟೀಲ ಮುಷ್ಟೂರು ಹೇಳಿದರು.

ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಆವರಣದಲ್ಲಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಸಿಗಳನ್ನು ನೆಟ್ಟರು. ವೈದ್ಯಾಧಿಕಾರಿಗಳಾದ ಡಾ.ಶರಣಪ್ಪ, ಡಾ.ಸುಧಾಕರ್, ಡಾ.ಪ್ರವೀಣ್ ಕುಮಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಾಲಪ್ಪ ನಾಯಕ ಹಾಗೂ ಬಾಬು ಚಿನ್ನು, ಮಲೇರಿಯಾ ಮೇಲ್ವಿಚಾರಕ ರಂಗಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಹನುಮೇಗೌಡ ಮತ್ತಿತರರು ಭಾಗವಹಿಸಿದ್ದರು.

ಪೊಲೀಸ್ ಠಾಣೆ: ಮಾನ್ವಿ ಪೊಲೀಸ್ ಠಾಣೆ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಶನಿವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪೊಲೀಸ್ ಇನ್‌ಸ್ಪೆಕ್ಟರ್‌ ಮಹಾದೇವಪ್ಪ, ಪಿಎಸ್‍ಐ ಸುನೀಲ್, ಪತ್ರಕರ್ತ ನವೀನ್‍ಕುಮಾರ, ಎಚ್.ಎಂ.ಬಾಬು, ಸೀನು, ಪೊಲೀಸ್ ಸಿಬ್ಬಂದಿ ರಾಮಪ್ಪ, ಬಸನಗೌಡ, ಶಾಂತಕುಮಾರ, ಡೇವಿಡ್ ಹಾಗೂ ಮತ್ತಿತರರು ಈ ವೇಳೆ ಇದ್ದರು.

ಅಂಬೇಡ್ಕರ್ ನಗರ: ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯಲ್ಲಿ ಮದ್ಲಾಪುರದ ವಂದೇ ಮಾತರಂ ಯುವಕ ಸಂಘ ಹಾಗೂ ಬಡವರ ಬಂಧು ಬಳಗ ಸಂಘಟನೆಗಳ ವತಿಯಿಂದ ಸಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಅಚರಿಸಲಾಯಿತು.

ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ, ಅರಣ್ಯಾಧಿಕಾರಿ ರಾಜೇಶ್ ನಾಯಕ ಸೇರಿ ಮತ್ತಿತರರು ಈ ವೇಳೆ ಇದ್ದರು.

ಮಾನ್ವಿ ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ವಕೀಲರ ಸಂಘ, ತಾಲ್ಲೂಕಿನ ಸಾದಾಪುರ, ಗೋರ್ಕಲ್, ಉಟಕನೂರು, ಸುಂಕೇಶ್ವರ, ನೀರಮಾನ್ವಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT