ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಹತ್ತಿ ದರದಲ್ಲಿ ಕಡಿತ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಾರುಕಟ್ಟೆಯಲ್ಲಿ ಹತ್ತಿ ದರ ನಿಗದಿಪಡಿಸಿದ ನಂತರ ಪುನಃ ಕ್ವಿಂಟಲ್‌ ಗೆ ₹ 100ರಿಂದ ₹ 150ವರೆಗೆ ಕಡಿಮೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಗಂಜ್ ವೃತ್ತದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಮ್ ಸಿ) ಕಚೇರಿವರೆಗೆ ಶುಕ್ರವಾರ ಮೆರವಣಿಗೆ ನಡೆಸಿದರು.

ಆನಂತರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ರಾಯಚೂರು ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ನೋಡಿದ ಬಳಿಕ ದರ ನಿಗದಿ ಮಾಡಲಾಗುತ್ತದೆ. ಆನಂತರ ಮಿಲ್‌ಗೆ ತೆಗೆದುಕೊಂಡು ಹೋದ ಮೇಲೆ ಮತ್ತೊಮ್ಮೆ ಕ್ವಿಂಟಲ್‌ಗೆ ₹ 150 ಕಡಿಮೆ ಮಾಡಿ ಬಿಲ್ ಮಾಡುತ್ತಾರೆ. ಇದನ್ನು ರೈತರು ಪ್ರಶ್ನೆ ಮಾಡಿದರೆ ಹತ್ತಿ ವಾಪಸ್ ತೆಗೆದುಕೊಂಡು ಹೋಗುವಂತೆ ಬೆದರಿಕೆ ಹಾಕುತ್ತಾರೆ. ಇದರಿಂದ ರೈತರು ಅನಿವಾರ್ಯವಾಗಿ ನಷ್ಟ ಅನುಭವಿಸಬೇಕಾಗಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ರೈತರಿಂದ ತೊಗರಿ, ಕಡಲೆ ಸ್ಯಾಂಪಲ್ ತೆಗೆದುಕೊಂಡು ಹೋಗುವುದನ್ನು ತಕ್ಷಣವೇ ರದ್ದುಪಡಿಸಬೇಕು. ಕಾರ್ಖಾನೆಗಳಿಗೆ ತೆಗೆದುಕೊಂಡ ಹೋದ ಹತ್ತಿಯ ಅನ್ ಲೋಡಿಂಗ್ ವೆಚ್ಚಗಳನ್ನು ರೈತರ ಮೇಲೆ ಹಾಕುತ್ತಿದ್ದು ಈ ವೆಚ್ಚವನ್ನು ವ್ಯಾಪಾರಸ್ಥರು ಭರಿಸಲು ಸೂಚನೆ ನೀಡಬೇಕು. ಹತ್ತಿಗೆ ದರ ನಿಗದಿಪಡಿಸಿದ ನಂತರ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಸೂಚನೆ ನೀಡಬೇಕು. ಇದನ್ನು ಸರಿಪಡಿಸದಿದ್ದರೆ ರೈತರೊಂದಿಗೆ ಎಪಿಎಂಸಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಮಲ್ಲಪ್ಪ, ಸಾಬಣ್ಣ, ಶಿವರಾಜ, ನರಸಪ್ಪ ಹೊಕ್ರಾಣಿ, ಹುಲಿಗೆಪ್ಪ ಜಾಲಿಬೆಂಚಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು