ಶುಕ್ರವಾರ, ಮೇ 27, 2022
30 °C
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಆಕ್ರೋಶ

ರೈತರಿಂದ ರಾಜ್ಯ ಹೆದ್ದಾರಿ ಸಂಚಾರ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ರೈತ, ಕಾರ್ಮಿಕರ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಬಳಿ ರಾಜ್ಯ ಹೆದ್ದಾರಿಯ ವಾಹನಗಳ ಸಂಚಾರ ತಡೆದು ಆಕ್ರೋಶ ಹೊರಹಾಕಿದರು.

ಕೇಂದ್ರ ಬಿಜೆಪಿ ಸರ್ಕಾರವು ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರ ವಿರುದ್ಧದ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ದೇಶದ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದೆಹಲಿಯಲ್ಲಿ ಹಲವು ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದರು ಅದಕ್ಕೆ ಸ್ಪಂದಿಸದ ಮೋದಿ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಎಂದು ಆರೋಪಿಸಿದರು.

ಕೂಡಲೇ ಕೇಂದ್ರ ಸರ್ಕಾರ ಕರಾಳ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ಕಾರ್ಮಿಕ ಸಂಹಿತೆಗಳ ತಿದ್ದುಪಡೆಯನ್ನು ಕೈಬಿಡಬೇಕು ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿತಿಯ ರಾಜ್ಯ ಮುಖಂಡ ಚಾಮರಸ ಮಾಲಿಪಾಟೀಲ, ಜಿಲ್ಲಾ ಸಂಚಾಲಕ ಕೆ.ಜಿ.ವೀರೇಶ್, ಮುಖಂಡರಾದ ಸೂಗೂರಯ್ಯ ಆರ್.ಎಸ್.ಮಠ ಮಲ್ಲಣ್ಣದಿನ್ನಿ, ಕರಿಯಪ್ಪ ಅಚ್ಚೊಳ್ಳಿ, ಡಿ.ಎಸ್.ಶರಣಬಸವ, ಮಾರೆಪ್ಪ ಹರವಿ, ಖಾಜ ಅಸ್ಲಂಪಾಷ, ರಾಮಬಾಬು, ರೂಪ ಶ್ರೀನಿವಾಸ ನಾಯಕ, ನರಸಪ್ಪ ಶಕ್ತಿನಗರ, ಜಿಂದಪ್ಪ ವಡ್ಲೂರು, ಶ್ರೀನಿವಾಸ ಕಲವಲದೊಡ್ಡಿ, ಎನ್.ಎಸ್.ವೀರೇಶ್, ಚನ್ನಬಸವ ಜಾನೇಕಲ್, ವಿ.ವಿ.ಭೀಮೇಶ್ವರರಾವ್, ಜಾನ್‍ವೆಸ್ಲಿ, ವಿದ್ಯಾಪಾಟೀಲ, ಈರಣ್ಣಶೆಟ್ಟಿ, ಶರಣಬಸವ ಮತ್ತಿತರರು ಇದ್ದರು.

ಎರಡು ತಾಸು ತಡೆ: ಮಧ್ಯಾಹ್ನ 12 ರಿಂದ ಸುಮಾರು 2 ತಾಸು ಸಂಚಾರ ತಡೆ ನಡೆಯಿತು. ಇದರಿಂದ ನಗರದಿಂದ ವಿವಿಧೆಡೆ ಸಂಚರಿಸುವವರು ತೊಂದರೆ ಅನುಭವಿಸುವಂತಾಯಿತು.

ಸಾರಿಗೆ ಸಂಸ್ಥೆಯ ಕೆಲವು ಬಸ್‍ಗಳು ಬೈಪಾಸ್ ಮಾರ್ಗವಾಗಿ ಸಂಚರಿಸಿದವು, ಅದೇ ರೀತಿ ರಾಯಚೂರು ನಗರಕ್ಕೆ ಬರುತ್ತಿದ್ದ ವಾಹನಗಳನ್ನು ಬೈಪಾಸ್‌ ಮೂಲಕವೇ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು