ಶುಕ್ರವಾರ, ಫೆಬ್ರವರಿ 28, 2020
19 °C

ಭೂ ಒಡೆತನ ಯೋಜನೆಯಲ್ಲಿ ಆಕ್ರಮ: ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆ ಜಾರಿಯಲ್ಲಿ ಮಾನ್ವಿ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸ್ವರಾಜ್‌ ಇಂಡಿಯಾ ಪಕ್ಷದಿಂದ ಮಂಗಳವಾರ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾನ್ವಿ ತಾಲ್ಲೂಕಿನ ಸಂಗಾಪುರ ಗ್ರಾಮದ ಫಲಾನುಭವಿಗಳಿಗೆ ಮಲ್ಲಿಗೆಮಡಗು ಸೀಮಾಂತರದ ಸರ್ವೇ ಸಂಖ್ಯೆ 28 ರ ಫಲವತ್ತಾದ ಭೂಮಿಯನ್ನು ಖರೀದಿ ಪೂರ್ವ ತೋರಿಸಲಾಗಿತ್ತು. ಆದರೆ, ನೋಂದಣಿಯಾದ ಬಳಿಕ ಕೃಷಿಗೆ ಯೋಗ್ಯವಲ್ಲದ ಜಮೀನು ಕೊಡಲಾಗಿದೆ ಎಂದು ಆರೋಪಿಸಿದರು.

ಸರ್ವೆ ಸಂಖ್ಯೆ 126 ರ ಭೂಮಿಯನ್ನು ಮೋಸ ಮಾಡಿ ನೋಂದಣಿ ಮಾಡಿಸಲಾಗಿದೆ. ಈ ಭೂಮಿಯು ಕಲ್ಲು ಬಂಡೆಗಳಿಂದ ಕೂಡಿದೆ. ಹಳ್ಳ ಹರಿದುಹೋಗಿದ್ದು, ಸವಳು ಹಿಡಿದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರಾಯಚೂರು ತಾಲ್ಲೂಕಿನ ವನಜಾ ಸತ್ಯನಾರಾಯಣ, ಸಾಯಿಪ್ರಸಾದ ಸೂರ್ಯನಾರಾಯಣ ಸೇರಿದಂತೆ ಇತರರು ಒಟ್ಟು 35 ಎಕರೆ ಜಮೀನನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಯೋಜನೆಯಡಿ ಈ ಭೂಮಿಯನ್ನು 35 ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇದೀಗ ಅರ್ಹ ಫಲಾನುಭವಿಗಳನ್ನು ವಂಚಿಸಿ, ಬೇರೆ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡುವುದಕ್ಕೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದರು.

ಕೂಡಲೇ ಈ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಮಂಜೂರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ ಬಲ್ಲಟಗಿ, ಆರ್‌.ಎಸ್‌.ಮಠ, ಸೂಗೂರಯ್ಯ, ಯಂಕಪ್ಪ ಕಾರಬಾರಿ, ಬಸವರಾಜ ಮಾಲಿಪಾಟೀಲ, ಮಲ್ಲಣ್ಣ ದಿನ್ನಿ ನೇತೃತ್ವ ವಹಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)