ಸೋಮವಾರ, ಫೆಬ್ರವರಿ 24, 2020
19 °C
ಕೆಎಎಸ್‌ ಹುದ್ದೆಗೆ ಆಯ್ಕೆಯಾದವರಿಗೆ ಸಾಹಿತಿ ವೀರಹನುಮಾನ ಕಿವಿಮಾತು

‘ಅಭಿವೃದ್ಧಿಗಾಗಿ ಶ್ರಮ ವಿನಿಯೋಗಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಓದಿಕೊಂಡು ಹುದ್ದೆಗೆ ಆಯ್ಕೆಯಾಗುವುದಕ್ಕೆ ಶ್ರಮ ವಿನಿಯೋಗಿಸಿದ ರೀತಿಯಲ್ಲಿಯೇ ಈ ಭಾಗದ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಸಾಹಿತಿ ವೀರಹನುಮಾನ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶಿಕ್ಷಣ ಕಿರಣ ಸಂಸ್ಥೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ 'ರಾಯಚೂರು ಜಿಲ್ಲೆಯಿಂದ ಕರ್ನಾಟಕ ಆಡಳಿತ ಸೇವೆಯ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಸಾಧಕರೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಈ ಭಾಗವು ಅಭಿವೃದ್ಧಿ ಆಗದೆ ಇರಲು ಏನು ಕಾರಣ ಎಂಬುದನ್ನು ಯೋಚಿಸಬೇಕು. ಅಧಿಕಾರದ ಪ್ರತಿ ಹಂತದಲ್ಲೂ ಇನ್ನೊಬ್ಬರ ಶ್ರಯೋಭಿವೃದ್ಧಿಯನ್ನು ಯೋಜಿಸಬೇಕು. ಪ್ರತಿಯೊಂದು ವಿಷಯವನ್ನು ಗಹನವಾಗಿ ತಿಳಿದುಕೊಂಡು ಕಡತಗಳಿಗೆ ರುಜು ಹಾಕಬೇಕು ಎಂದರು.

ಅಧಿಕಾರಲ್ಲಿದ್ದಾಗ ಮೈಮರೆವು ಒಳ್ಳೆಯದಲ್ಲ. ವಿಷಯವನ್ನು ಅರ್ಧಮರ್ಧ ತಿಳಿದುಕೊಂಡು ಅರ್ಜಿಗಳಿಗೆ ರುಜು ಹಾಕಬಾರದು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಮಾತನಾಡಿ, ಈ ವರ್ಷ ಕೆಎಎಸ್ ಪಾಸಾದವರ ಸಂಖ್ಯೆ ಮುಂಬರುವ ‌ವರ್ಷಗಳಲ್ಲಿ ದ್ವಿಗುಣವಾಗಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪ್ರಯತ್ನ ಕೈಬಿಡಬಾರದು. ಕನಿಷ್ಠ ಪಕ್ಷ ದಿನಕ್ಕೆ ಆರು ಗಂಟೆ ಓದಬೇಕು. ದಿನಪತ್ರಿಕೆಗಳನ್ನು ತಪ್ಪದೇ ಓದಬೇಕು. ಹಿರಿಯರ ಮಾರ್ಗದರ್ಶನ ಹಾಗೂ ಗುಂಪು‌ ಚರ್ಚೆ‌‌ ಮಾಡಬೇಕು. ಅಧಿಕಾರಿಗಳಾಗಿ ಆಯ್ಕೆಯಾದವರು ಮೇಲಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಕಾಯ್ದೆ‌ಗಳನ್ನು ಚೆನ್ನಾಗಿ ತಿಳಿದುಕೊಂಡು ಆಡಳಿತ ನಡೆಸಬೇಕಾಗುತ್ತದೆ. ಕೆಎಎಸ್, ಐಎಎಸ್ ಹುದ್ದೆಗಳಿಗೆ ಈ ಮೊದಲು ದಕ್ಷಿಣ ಭಾಗದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಇದೀಗ ಎಲ್ಲ ಜಿಲ್ಲೆಗಳಿಂದಲೂ ಆಯ್ಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಕೆಎಎಸ್‌ ಹುದ್ದೆಗೆ ನೂತನವಾಗಿ ಆಯ್ಕೆಯಾಗಿರುವ ಪ್ರಾಣೇಶ, ಸೋಮಶೇಖರ ಬಿರಾದಾರ, ಲಕ್ಷ್ಮೀದೇವಿ, ಸ್ಮಿತಾ ಪಾಟೀಲ, ಶ್ವೇತಾ, ಮೆಹಬೂಬ್‌ ಜಿಲಾನಿ, ಗಂಗಾಧರ, ಭೀಮನಗೌಡ, ಮಾಲಿಂಗರಾಯ ಪಾಟೀಲ, ಬೀರೇಂದ್ರ, ಗ್ಯಾನಪ್ಪ, ಮಲ್ಲಯ್ಯ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಸದಸ್ಯ ಜಯಣ್ಣ, ಡಾಯಟ್‌ ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಟಿ.ರೋಣಿ, ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ಹಫೀಜುಲ್ಲಾ, ಸಂಗಮೇಶ, ಪ್ರದೀಪ ವೆಂಕಟೇಶ್‌, ಉಪನ್ಯಾಸಕ ಹನುಮಂತಪ್ಪ, ಈರಣ್ಣ ಕೋಸಗಿ ಇದ್ದರು.

ಶಿಕ್ಷಣ ಕಿರಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಗವಾಯಿ ಸ್ವಾಗತಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಬಸಪ್ಪ ಗದ್ದಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)