ಗುರುವಾರ , ಸೆಪ್ಟೆಂಬರ್ 23, 2021
23 °C
ವಿವಿಧೆಡೆ ನದಿಪಾತ್ರದ ಜಮೀನುಗಳಲ್ಲಿ ಬೆಳೆಹಾನಿ

ಪ್ರವಾಹ: ಕೃಷ್ಣಾ ಏರಿಕೆ, ತುಂಗಭದ್ರಾ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಬುಧವಾರವೂ ಪ್ರವಾಹ ಮುಂದುವರಿದಿದ್ದು, ನಾಲ್ಕು ದಿನಗಳಿಂದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.

ಕೃಷ್ಣಾನದಿಯಲ್ಲಿ ಸ್ಥಿರವಾಗಿದ್ದ ಪ್ರವಾಹಮಟ್ಟ ಬುಧವಾರ 4 ಲಕ್ಷ ಕ್ಯುಸೆಕ್‌ ಅಡಿವರೆಗೂ ಏರಿಕೆಯಾಗಿದೆ. ದೇವದುರ್ಗ ಪಕ್ಕದ ಹೂವಿನಹೆಡಗಿ ಸೇತುವೆ ಪಕ್ಕದಲ್ಲಿದ್ದ ಹೋಟೆಲ್‌ಗಳಿಗೆ ನೀರು ನುಗ್ಗಿದೆ. ತುಂಗಭದ್ರಾ ನದಿಯಲ್ಲಿ ಪ್ರವಾಹಮಟ್ಟ ಇಳಿಮುಖವಾಗಿದ್ದು, 79 ಕ್ಯುಸೆಕ್‌ ಅಡಿ ನೀರು ಹರಿದು ಬರುತ್ತಿದೆ.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ, ಅಂಜಳ, ಜೋಳದಹೆಡಗಿ, ಗೂಗಲ್‌ ಗ್ರಾಮಗಳ ಕೃಷಿ ಜಮೀನುಗಳಿಗೆ ಪ್ರವಾಹ ನುಗ್ಗಿದ್ದರಿಂದ ಭತ್ತದ ಬೆಳೆಹಾನಿಯಾಗಿದೆ. ತಾಲ್ಲೂಕು ಕೃಷಿ ಅಧಿಕಾರಿಗಳು ಬೆಳೆಹಾನಿ ಪರಿಶೀಲನೆ ಆರಂಭಿಸಿದ್ದಾರೆ.

ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕು ಕೇಂದ್ರಗಳಲ್ಲಿ ಎನ್‌ಡಿಆರ್‌ಎಫ್‌ ತಂಡಗಳು ಬೀಡುಬಿಟ್ಟಿವೆ. ಅಪಾಯದ ಮುನ್ಸೂಚನೆ ಅರಿತು ಕಾರ್ಯಾಚರಣೆ ಮಾಡುವುದಕ್ಕೆ ತೆರಳಲಿವೆ. ಅಲ್ಲದೆ, ಎಸ್‌ಡಿಆರ್‌ಎಫ್‌ ತಂಡದವರು ನದಿತೀರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

‘ಲಿಂಗಸುಗೂರು ಮತ್ತು ರಾಯಚೂರು ತಾಲ್ಲೂಕು ನಡುಗಡ್ಡೆಗಳಲ್ಲಿ ಮುಂಚಿತವಾಗಿಯೇ ಪಡಿತರ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ ಸ್ಥಿತಿಗತಿ ಬಗ್ಗೆ ವರದಿ ಪಡೆಯಲಾಗುತ್ತಿದೆ. ಸಮಸ್ಯೆ ಎದುರಾದರೆ ಪರಿಹರಿಸಲಾಗುವುದು. ಪ್ರವಾಹ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು