ಶನಿವಾರ, ಸೆಪ್ಟೆಂಬರ್ 21, 2019
24 °C

‘ಸಂಚಾರ ನಿಯಮ ಪ್ರತಿಯೊಬ್ಬರೂ ಪಾಲಿಸಿ’

Published:
Updated:

ರಾಯಚೂರು: ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ತಪ್ಪದೇ ಪಾಲಿಸುವ ಮೂಲಕ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ಉಮೇಶ ಹೇಳಿದರು.

ನಗರದ ಸಂಚಾರಿ ಪೊಲೀಸ್ ಠಾಣೆಯ ಹತ್ತಿರ ಪೊಲೀಸ್ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಸರಕು ಸಾಗಣಿಕೆ ವಾಹನಗಳ ಮಾಲೀಕರ ಹಾಗೂ ಚಾಲಕರ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಸರಕು ಸಾಗಣೆ ವಾಹನಗಳಲ್ಲಿ ಸರಕುಗಳನ್ನು ಮಾತ್ರ ಸಾಗಣೆ ಮಾಡಬೇಕು. ಪ್ರಯಾಣಿಕರನ್ನು ಒತ್ತೊಯ್ಯುವ ಕೆಲಸ ಮಾಡಬಾರದು. ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ಆಟೋ ಚಾಲಕರು ಕೂಡ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಎಚ್ಚರಿಕೆ ವಹಿಸಬೇಕು. ಆತುರದಲ್ಲಿ ಸಂಚಾರ ನಿಮಯಗಳನ್ನು ಉಲ್ಲಂಘನೆ ಮಾಡುವ ಕೆಲಸಕ್ಕೆ ಹೋಗಬಾರದು. ನಿಯಮಗಳ ಪಾಲನೆಯಿಂದ ತೊಂದರೆಗಳು ದೂರವಾಗಲಿವೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಕೆ.ಬಸವರಾಜ ಮಾತನಾಡಿ, ಪ್ರಯಾಣಿಕರಿಗಾಗಿ ಸಾರಿಗೆ ಇಲಾಖೆಯಿಂದ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರು ತಡವಾದರೂ ಪರವಾಗಿಲ್ಲ ಬಸ್‌ನಲ್ಲಿಯೇ ಪ್ರಯಾಣಿಸಬೇಕು ಎಂದು ಹೇಳಿದರು.

ಅಗತ್ಯಕನುಗುಣವಾಗಿ ಬಸ್ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಜನರು ಸೌಲಭ್ಯವನ್ನು ಪಡೆಯಲು ಮುಂದಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಆಟೋ ಚಾಲಕರು ತಪ್ಪದೇ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ನಿಯಮಗಳನ್ನು ಉಲ್ಲಂಘಿಸಿ ಜನರಿಗೆ ತೊಂದರೆ ಮಾಡಬಾರದು. ಮದ್ಯಪಾನ ಮಾಡಿ ವಾಹನಗಳನ್ನು ಚಲಾವಣೆ ಮಾಡಲೇಬಾರದು. ಇಲ್ಲದಿದ್ದರೆ ಪ್ರಾಣಕ್ಕೆ ಮುಪ್ಪು ತಂದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ವಾಹನ ಮಾಲೀಕರು ಹಾಗೂ ಚಾಲಕರು ಇದ್ದರು.

Post Comments (+)