ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಚಿಕಿತ್ಸೆಗೆ ಗಾಂಧೀಜಿ ಮಹತ್ವ- ಭೂಪತಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಹೇಳಿಕೆ

Last Updated 21 ಡಿಸೆಂಬರ್ 2021, 13:30 IST
ಅಕ್ಷರ ಗಾತ್ರ

ರಾಯಚೂರು: ಮಹಾತ್ಮಗಾಂಧಿ ಅವರು ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವ ಜೊತೆಗೆ ಉಪವಾಸ, ಮೌನ, ಮಿತ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟು ತಿಳಿಸಿದ್ದಾರೆ. ಅವರ ಜೀವನ ಆದರ್ಶ ಎಲ್ಲರಿಗೆ ಮಾದರಿಯಾಗಿದೆ ಎಂದು ಭೂಪತಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ, ಎನ್ಎಸ್ಎಸ್ ಘಟಕ ಐಕ್ಯೂಎಸಿ, ಯುವ ಸಬಲೀಕರಣ ಇಲಾಕೆ, ಗಾಂಧಿ ಸ್ಮಾರಕ ನಿಧಿ ಹಾಗೂ ಯು.ಭೂಪತಿ ಸ್ಮಾರಕ ಟ್ರಸ್ಟ್‌ನಿಂದ ಮಂಗಳವಾರ ಏರ್ಪಡಿಸಿದ್ದ ಮಹಾತ್ಮಗಾಂಧಿ ಕುರಿತ ವಿಚಾರ ಸಂಕಿರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಗಾಂಧಿ ಎಂದರೆ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ. ಗಾಂಧೀಜಿ ಅವರು ಪ್ರಾಕೃತಿ ಚಿಕಿತ್ಸೆ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಸಂದರ್ಭದಿಂದ ಅಲೋಪತಿಯ ಚಿಕಿತ್ಸೆ ಪದ್ದತಿಯಿಂದ ದೂರ ಉಳಿದಿದ್ದರು. ಹೊಟ್ಟೆ ನೋವು, ಬೇಧಿ, ಇತರೆ ಯಾವುದೇ ಕಾಯಿಲೆಗೆ ಒಳಗಾದರೂ ಪ್ರಕೃತಿ ಚಿಕಿತ್ಸೆಯ ಮೋರೆ ಹೋಗುತ್ತಿದ್ದರು. ಇದರಿಂದ ಅವರು ಹೆಚ್ಚು ದಿನ ಬದುಕಿದ್ದರು. ರಾಯಚೂರಿನ ಪಂಡಿತ್ ತಾರಾನಾಥ ಅವರು ಪ್ರಕೃತಿ ಚಿಕಿತ್ಸೆ ವೈದ್ಯರಾಗಿದ್ದರು. ನಂದಿ ಬೆಟ್ಟದಲ್ಲಿ ಒಮ್ಮೆ ಗಾಂಧೀಜಿ ಅವರಿಗೆ ಚಿಕಿತ್ಸೆ ನೀಡಿದ್ದರು ಎಂದು ಹೇಳಿದರು.

ಸತ್ಯ, ಅಹಿಂಸೆ, ತಾಳ್ಮೆಯನ್ನು ಹೋರಾಟದ ಅಸ್ತ್ರವಾಗಿಟ್ಟುಕೊಂಡಿದ್ದ ಗಾಂಧೀಜಿ ಅವರು ಉಪವಾಸ, ಮೌನ, ಪ್ರಾರ್ಥನೆ, ಸೂರ್ಯನಿಗೆ ಮೈಒಡ್ಡುವುದು, ಕಾಲ್ನಡಿಗೆ, ಮಿತಆಹಾರ ಸೇವೆನೆ ಮೂಲಕ ಆರೋಗ್ಯ ಕಾಪಾಡಿಕೊಂಡು ಧೀರ್ಘಕಾಲ ಬಾಳಿದ್ದಾರೆ. ಹಿರಿಯರ ಸಲಹೆ ಮೇರೆಗೆ ಪ್ರಕೃತಿ ಚಿಕಿತ್ಸೆ ಪಡೆಯಲು ಆಲೋಚಿಸಬಹುದು ಎಂದು ಸಲಹೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣ‍ಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಕಣ್ಣುಗಳು, ಭಾರತಿಯರ ಹೆಮ್ಮೆ. ಇಬ್ಬರ ವ್ಯಕ್ತಿತ್ವ ತಿಳಿದುಕೊಂಡು ಅವರ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಅವರ ಕಲ್ಪನೆ ಸ್ವಚ್ಛ ಭಾರತ ಯೋಜನೆ ಸಕಾರಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯ ರಚನೆಯ ಉದ್ದೇಶವಾಗಿದೆ. ಗಾಂಧೀಜಿ ಅವರು ಉಪ್ಪು, ಚರಕ, ಪೊರಕೆಯ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಾಲೇಜಿನ ವಿದ್ಯಾರ್ಥಿಗಳಿಗೆ ದೇಶಪ್ರೇಮ, ಶಿಸ್ತು, ಸೌಹಾರ್ದ ಹಾಗೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಎನ್ಎಸ್ಎಸ್ ಸಹಾಯವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೊರಾಟಗಾರ ಡಿ.ಪಂಪಣ್ಣ., ಅಮರೇಶ ಪಾಟೀಲರ ಪುತ್ರರಿಗೆ ಸನ್ಮಾನಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ಡಿ.ಪಂಪಣ್ಣ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಅವರು ವ್ಯಕ್ತಿಯ ಅಂತರಂಗ ಜಾಗೃತರಾದರೆ ಯಾವುದೇ ಕೆಲಸ ಮಾಡುವುದು ಕಠಿಣವಲ್ಲ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರೆ ಅದೇ ದೇಶಕ್ಕೆ ನೀಡುವ ಗೌರವ. ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ.ಎಲ್ ಈರಣ್ಣ, ಐಕ್ಯೂಎಸಿ ಘಟಕದ ಸಂಚಾಲಕ ಮಹಾಂತೇಶ ಅಂಗಡಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವೆಂಕಟೇಶ, ಸಾಹಿತಿ ಹಾಗೂ ಹೃದಯರೋಗ ತಜ್ಞ ಡಾ.ಸುರೇಶ ಸಗರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT