ಮಂಗಳವಾರ, ಫೆಬ್ರವರಿ 18, 2020
16 °C

ಸರ್ಕಾರ ಬದ್ಧವಾಗಿದ್ದರೆ ಬಡತನ ನಿರ್ಮೂಲನೆ: ಸಿದ್ಧರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ರೈತರ ಜಮೀನಿಗೆ ನೀರು ಒದಗಿಸುವ ಪ್ರಯತ್ನಕ್ಕೆ ಸರ್ಕಾರಗಳು ಬದ್ಧವಾಗಿದ್ದರೆ ನೀರಾವರಿ ಸೌಕರ್ಯ ಹೆಚ್ಚುವ ಮೂಲಕ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.

ತಾಲ್ಲೂಕಿನ ವಳಬಳ್ಳಾರಿ ಗ್ರಾಮದಲ್ಲಿ ವಳಬಳ್ಳಾರಿ ಏತನೀರಾವರಿ ಯೋಜನೆಗೊಳಪಡುವ ಆರ್.ಎಚ್.ನಂ.5, ಹರೇಟನೂರು, ಬಾದರ್ಲಿ, ಗಿಣಿವಾರ ಮತ್ತು ಅಲಬನೂರು ಗ್ರಾಮದ ರೈತರು ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

2013ಕ್ಕಿಂತ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ₹50 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಸೌಕರ್ಯ ಒದಗಿಸುವುದಾಗಿ ಭರವಸೆ ಕೊಡಲಾಗಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಬೃಹತ್ ನೀರಾವರಿ, ಏತನೀರಾವರಿ, ಕೆರೆ ತುಂಬುವ ಕೆಲಸಗಳಿಗೆ ಐದು ವರ್ಷದಲ್ಲಿ ಒಟ್ಟು ₹55 ಸಾವಿರ ಕೋಟಿ ಖರ್ಚು ಮಾಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು. ಸಭಿಕರೆಲ್ಲರೂ ಕರತಾಡನ ಮಾಡಿದರು.

ಅಂದು ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ಅದೇ ಸಂದರ್ಭದಲ್ಲಿ ಹಂಪನಗೌಡ ಬಾದರ್ಲಿ ಅವರು ವಳಬಳ್ಳಾರಿ, ತಿಮ್ಮಾಪುರ, ಶಿರನಗುಡಿ ಮತ್ತು ಗೊರೇಬಾಳ ಪಿಕಪ್ ಡ್ಯಾಂಗಳನ್ನು ಮಂಜೂರು ಮಾಡಿಸಿಕೊಂಡರು. ಅವರು ಹೇಳಿದ ಯಾವುದೇ ಕೆಲಸಗಳಿಗೆ ತಾವು ನಿರಾಕರಣೆ ಮಾಡಿಲ್ಲ. 1991ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿದ ಸಮಯದಲ್ಲಿ ಹಂಪನಗೌಡ ಮತ್ತು ವಿರೂಪಾಕ್ಷಪ್ಪ ಮಾಡಿರುವ ಉಪಕಾರ ಜೀವನದಲ್ಲಿ ಮರೆಯುದಿಲ್ಲ. ಆ ಕಾರಣಕ್ಕಾಗಿಯೇ ಸಿಂಧನೂರು ಕ್ಷೇತ್ರದ ಜನರ ಋಣ ತೀರಿಸಲು ಪ್ರಯತ್ನಿಸಿದ್ದಾರಿ ಹೇಳಿದರು.

ಹಸಿವು ಮುಕ್ತ ರಾಜ್ಯ: ದೇಶದಲ್ಲಿ ಕರ್ನಾಟಕ ಮಾತ್ರ ಹಸಿವು ಮುಕ್ತ ರಾಜ್ಯವಾಗಿದೆ. ಹಸಿವಿನ ನೋವು ಅರ್ಥವಾಗದ ಜನರಿಗೆ ಬಡವರ ಸಂಕಟಗಳು ಅರ್ಥವಾಗುವುದಿಲ್ಲ. ಇದನ್ನು ಗಮನಿಸಿಯೇ ತಾವು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ತಲಾ 7 ಕೆಜಿ ಅಕ್ಕಿ ಕೊಡುವ ತೀರ್ಮಾನ ಕೈಗೊಂಡಿದ್ದೆ ಎಂದರು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ಈರುಳ್ಳಿ, ಬೆಳ್ಳೊಳ್ಳಿ ತಿನ್ನುವುದಿಲ್ಲ ಎಂದು ಹೇಳಿದ್ದಾರೆ. ಹಿಂಗೂ ಮಾತ್ರ ತಿನ್ನುತ್ತಾರಂತೆ. ದೇಶದ ಶೇ 97 ರಷ್ಟು ಜನ ಈರುಳ್ಳಿ, ಬೆಳ್ಳೊಳ್ಳಿ ತಿನ್ನುತ್ತಿರುವುದು ಅವರಿಗೆ ಗೊತ್ತಾಗದಿರುವುದು ದುರದೃಷ್ಟಕರ ಎಂದು ಟೀಕಿಸಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಮಾಜಿ ಸಚಿವ ಶಿವರಾಜ ತಂಗಡಗಿ, ಮುಖಂಡ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಹಂಪಯ್ಯ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದುರುಗಪ್ಪ ಗುಡಗಲದಿನ್ನಿ, ಬಸವರಾಜ ಹಿರೇಗೌಡರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿ ಗುರಿಕಾರ, ಮುಖಂಡ ಜಾಫರಅಲಿ ಜಾಗೀರದಾರ್ ಇದ್ದರು. ಬಸವಲಿಂಗಪ್ಪ ಹಾಗೂ ಚಂದ್ರೇಗೌಡ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು