ಸೋಮವಾರ, ಸೆಪ್ಟೆಂಬರ್ 28, 2020
28 °C
ಸೇವಾ ಭದ್ರತೆ ಹಾಗೂ ಸೇವಾ ವಿಲೀನತೆಗಾಗಿ ವಿಶೇಷ ನಿಯಾವಳಿ ರಚನೆಗೆ ಆಗ್ರಹ

ಅತಿಥಿ ಉಪನ್ಯಾಸಕರಿಂದ ಆಹೋರಾತ್ರಿ ಧರಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ಸೇವಾ ಭದ್ರತೆ ಒದಗಿಸಬೇಕು ಹಾಗೂ ಸೇವಾ ವಿಲೀನತೆಗಾಗಿ ವಿಶೇಷ ನಿಯಾವಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಮೂರು ದಿನಗಳ ಅಹೋರಾತ್ರಿ ಧರಣಿಯನ್ನು ಮಂಗಳವಾರ ಆರಂಭಿಸಿದರು.

ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನಿಷ್ಠ ಗೌರವ ಧನದೊಂದಿಗೆ ಸುಮಾರು 18 ವರ್ಷಗಳಿಂದಲೂ ಸೇವೆ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈಚೆಗೆ ನಡೆದ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ₨25 ಸಾವಿರ ವೇತನ ನೀಡಲು ವಿಧಾನ ಪರಿಷತ್ ಸದಸ್ಯರು ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸಹಮತದೊಂದಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಕ್ಕಾಗಿ ದೆಹಲಿ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳ ಮಾದರಿ ರೂಪದಲ್ಲಿ ಕಾಯಂಗೊಳಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಸಂಪುಟ ಸಮಿತಿಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮತ್ತೆ 3,800 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಈಗಿರುವ ಅತಿಥಿ ಉಪನ್ಯಾಸಕರು ಆತಂಕ ಪಡುವಂತಾಗಿದೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಸ್ಪಂದನೆ ಕೊಡಬೇಕು. ಇಲ್ಲದಿದ್ದರೆ ಡಿಸೆಂಬರ್ 17ರಂದು ಅತಿಥಿ ಉಪನ್ಯಾಸಕರ ಕುಟುಂಬಗಳೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಬಸವ ಪಾಟೀಲ, ಕಾರ್ಯದರ್ಶಿ ವೀರೇಶ ಜಕ್ಕಲದಿನ್ನಿ, ಪದಾಧಿಕಾರಿಗಳಾದ ಬಸವರಾಜ ನಾಯಕ, ಅಮರೇಶ ಲಿಂಗಸುಗೂರು, ಸಿದ್ಧಯ್ಯಸ್ವಾಮಿ ಸಿರವಾರ, ಪುಷ್ಪಾವತಿ, ಸದಸ್ಯರಾದ ಈರಣ್ಣ ಗಟ್ಟುಬಿಚ್ಚಾಲಿ, ಹನುಮಂತ ನಿಲವಂಜಿ, ದೇವರಾಜ, ರವಿಕುಮಾರ, ಅನಿಲಕುಮಾರ, ಸುಜಾತ ಪಾಟೀಲ, ವಾಣಿ, ಸುರೇಶ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.