ಭಾನುವಾರ, ಏಪ್ರಿಲ್ 18, 2021
33 °C
ಶಿವಶರಣ ಹಡಪದ ಅಪ್ಪಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ

'ಎಲ್ಲರೂ ಒಗ್ಗೂಡಿದಾಗ ಸಾಧನೆ ಮಾಡಲು ಸಾಧ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಾತಿ, ಜನಾಂಗದ ಭೇದಬಾವ ಮಾಡದೇ ಎಲ್ಲರೂ ಒಗ್ಗೂಡಿದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಉಪವಿಭಾಗಾಧಿಕಾರಿ ಸಂತೂಷ ಕಾಮಗೌಡ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧ್ಯಾತ್ಮಿಕತೆ ಕಟ್ಟಿದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರು ನಾಡು, ನುಡಿ, ಸಮಾಜ ನಿರ್ಮಾಣದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇವರ ಹಾದಿಯಲ್ಲಿ ನಡೆದುಕೊಂಡು ಆಚಾರ ವಿಚಾರಗಳನ್ನು ಅಳವಡಿಕೊಂಡರೆ ಜಯಂತಿಗಳಿಗೆ ಗೌರವ ನೀಡಿದಂತಾಗುತ್ತದೆ ಎಂದರು.

200ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣರವರು ಜನರ ಬದುಕಿಗೆ ಆಶಾ ಜ್ಯೋತಿಯಾಗಿದ್ದಾರೆ. ನಾಡಪ್ರಭು ಕೆಂಪೇಗೌಡರು 1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ, ವಿಶ್ವವಿಖ್ಯಾತಿಗೆ ಹೆಸರುವಾಸಿಯಾಗಿಸಿದ್ದಾರೆ ಎಂದು ತಿಳಿಸಿದರು.

ಸುದ್ದಿಮೂಲ ಸಂಪಾದಕ ಬಸವರಾಜ ಸ್ವಾಮಿ ಉಪನ್ಯಾಸ ನೀಡಿ, ಅಜ್ಞಾನದ ವಿರುದ್ಧ ಹೋರಾಡಿ ಜ್ಞಾನ ತಂದುಕೊಟ್ಟ ಶರಣರಲ್ಲಿ ಶಿವಶರಣ ಹಡಪದ ಅಪ್ಪಣ್ಣ ಒಬ್ಬರಾಗಿದ್ದು, 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಆತ್ಮೀಯರಾಗಿ ಹಲವು ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಅಜ್ಞಾನದ ವಿರುದ್ಧ ಸ್ವಯಂಕ್ರಾಂತಿಯಿಂದ ಹೋರಾಡಿ ಆಧ್ಯಾತ್ಮಿಕವಾಗಿ ಅರಿತುಕೊಂಡು ಬದುಕು ಕಟ್ಟಿಕೊಳ್ಳಬೇಕು. ತನ್ನನ್ನು ತಾನು ತಿಳಿದುಕೊಂಡಾಗ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದರು.

ಹಾಸ್ಮಿಯಾ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೊಹಮ್ಮದ್ ಅಬ್ದುಲ್ ಯೂನಸ್ ಉಪನ್ಯಾಸ ನೀಡಿ, ಕನ್ನಡ ನಾಡು ರಾಜರು, ಸೂಫಿ, ಸಂತರಂತಹ ಶರಣರನ್ನು ನೀಡಿದೆ. ನುಡಿದಂತೆ ನಡೆದ ಶರಣರ ಜಯಂತಿಗಳನ್ನು ಆಚರಣೆ ಮಾಡುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಒಂಭತ್ತು ವರ್ಷಗಳು ಗುರುಮಾಧವಭಟ್ಟರ ಗುರುಕುಲದಲ್ಲಿ ಅಭ್ಯಾಸ ಮಾಡಿದ ಕೆಂಪೇಗೌಡರು ಚಿಕ್ಕ ವಯಸ್ಸಿನಿಂದ ಧೈರ್ಯಶಾಲಿಯಾಗಿದ್ದರು. ಅವರ ಆಡಳಿತದಲ್ಲಿ ಗ್ರಾಮಕ್ಕೊಂದು ಕೆರೆ, ರಸ್ತೆ, ಗಿಡಗಳು ಹಾಗೂ ಗುರುಕುಲಗಳನ್ನು ನಿರ್ಮಿಸಿದ್ದಾರೆ. 374 ದೊಡ್ಡ ಕೆರೆ ಹಾಗೂ 12 ಸಣ್ಣ ಪ್ರಮಾಣದ ಕೆರೆಗಳನ್ನು ನಿರ್ಮಿಸಿ ರೈತಾಪಿ ವರ್ಗಕ್ಕೆ ನೀರಿನ ವ್ಯವಸ್ಥೆ ಮಾಡಿ ಹೆಸರುವಾಸಿಯಾಗಿದ್ದಾರೆ ಎಂದರು.

ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ರಾಚನಗೌಡ, ಜಿಲ್ಲಾ ಅಧ್ಯಕ್ಷ ಮಹಾಬಲೇಶ, ಉಪಾಧ್ಯಕ್ಷ ಬಸವರಾಜ ಚಿಂಚರಕಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಾಗರಾಜ ಸರ್ಜಾಪೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.