ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೆಳೆಗೆ ಕಂಠಕವಾದ ಅತಿವೃಷ್ಟಿ

ನೆಲಕ್ಕೆ ಒರಗಿದ ಸಜ್ಜೆ, ಸೂರ್ಯಪಾನದಲ್ಲಿ ಮೊಳಕೆ
Last Updated 21 ಸೆಪ್ಟೆಂಬರ್ 2020, 14:49 IST
ಅಕ್ಷರ ಗಾತ್ರ

ರಾಯಚೂರು: ಆರಂಭದಲ್ಲಿ ಕೃಷಿಗೆ ಹಿತಕರವಾಗಿದ್ದ ಮುಂಗಾರುಮಳೆ ಈಗ ಮಾರಕವಾಗಿ ಪರಿಣಮಿಸಿದೆ. ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ರಾತ್ರಿಯಿಡೀ ಮಳೆ ಸುರಿಯುತ್ತಿದ್ದು, ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಬೆಳೆಗಳು ಹಾನಿಯಾಗಿವೆ.

ಹತ್ತಿಬೆಳೆಯಲ್ಲಿ ಸಾಕಷ್ಟು ಕಾಯಿಗಳು ಬಂದಿದ್ದವು. ಈ ವರ್ಷವೂ ಬಂಪರ್‌ ಲಾಭದ ನಿರೀಕ್ಷೆಯಲ್ಲಿದ್ದ ರೈತರೆಲ್ಲ ನಿರಾಸೆ ಅನುಭವಿಸುವಂತಾಗಿದೆ. ‘ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವಂತಾಗಿದೆ. ಕೊಯ್ಲಿಗೆ ಬರುವ ಮೊದಲೆ ಹತ್ತಿಕಾಯಿಗಳು ಬಾಯಿಬಿಟ್ಟಿವೆ. ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳು ನೆಲಕ್ಕೆ ಬಿದ್ದಿದ್ದು, ಅದರಲ್ಲಿ ಮೊಳಕೆ ಬಂದು ಹಾನಿಯಾಗಿವೆ.

ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ಸುರಿಯುತ್ತಿದೆ. ಚಂದ್ರಬಂಡಾ, ಸರ್ಜಾಪುರ, ದೇವುಸುಗೂರು, ಬೂರ್ದಿಪಾಡ, ಗಿಲ್ಲೇಸುಗೂರು, ಯರಗೇರಾ, ಇಡಪನೂರು, ಮಿಡಗಲ್, ನೆಲಹಾಳ ಸೇರಿದಂತೆ ಹಲವು ಕಡೆ ಅತಿವೃಷ್ಟಿ ಕಾರಣ ಬೆಳೆಗಳೆಲ್ಲ ಹಾನಿಯಾಗಿವೆ. ಸದ್ಯಕ್ಕೆ ಭತ್ತದ ಬೆಳೆ ಮಾತ್ರ ಉಳಿದಿದೆ. ಆದರೆ, ಕಾಯಿಕಟ್ಟುವ ಹೊತ್ತಿಗೆ ಅದರ ಮೇಲೂ ಅತಿಯಾದ ನೀರಿನಿಂದ ಹಾನಿಯಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

‘ಕೃಷಿ ಇಲಾಖೆಯವರು ಈ ಬಗ್ಗೆ ಸಮೀಕ್ಷೆ ಮಾಡುತ್ತಿದ್ದಾರೆ. ಯಾವ ರೀತಿ ಪರಿಹಾರ ಕೊಡುತ್ತಾರೆ ಎಂಬುದನ್ನು ನೋಡಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಾ ಸಮೀಕ್ಷೆಗೆ ಬರುತ್ತಿದ್ದಾರೆ. ಕಳೆದ ವರ್ಷ ಬೆಳೆ ಬೆಳೆದಿದ್ದ ರೈತರಿಗೆ ಪರಿಹಾರ ಸಿಕ್ಕಿರಲಿಲ್ಲ. ಬೆಳೆಯನ್ನೇ ಬೆಳೆದಿದ್ದ ರೈತರ ಖಾತೆಗಳಿಗೆ ಪರಿಹಾರ ಜಮಾ ಆಗಿತ್ತು. ಇಂತಹ ಅನ್ಯಾಯ ಈ ವರ್ಷವೂ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಇಲಾಖೆಗಳಿಗೆ ಕೋರಲಾಗಿದೆ’ ಎಂದು ಕಡಗಂದೊಡ್ಡಿ ರೈತ ಲಕ್ಷ್ಮಣಗೌಡ ಹೇಳಿದರು.

ಮಾನ್ವಿಯಲ್ಲಿ ತೊಗರಿ ಬೆಳೆ, ಸಿಂಧನೂರಿನಲ್ಲಿ ಭತ್ತದ ಬೆಳೆಗಳು ಹಾನಿಯಾಗಿವೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ವಿವರಣೆ. ಬೆಳೆಹಾನಿ ಆಗಿರುವ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಶೀಘ್ರದಲ್ಲೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವುದಕ್ಕೆ ಪೂರ್ವತಯಾರಿ ಮಾಡಿಕೊಂಡಿದ್ದಾರೆ. ಬೆಳೆಹಾನಿ ಸಮೀಕ್ಷೆ ನಡೆಸಿರುವ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಆಗಲಿದೆ. ಬೆಳೆಹಾನಿಗೆ ಪರಿಹಾರ ಒದಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ.

ಸೆಪ್ಟೆಂಬರ್‌ 1 ರಿಂದ ಇದುವರೆಗೂ ಜಿಲ್ಲೆಯಲ್ಲಿ ಶೇ 30 ರಷ್ಟು ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆ 98 ಮಿಲಿಮೀಟರ್‌ ಆಗಬೇಕಿತ್ತು. ಆದರೆ, ವಾಸ್ತವದಲ್ಲಿ 127 ಮಿಲಿಮೀಟರ್‌ ಮಳೆಯಾಗಿದೆ. ಜೂನ್‌ 1ರಿಂದ ಇದುವರೆಗೂ ಬಿದ್ದಿರುವ ಮುಂಗಾರು ಮಳೆ ಪ್ರಮಾಣವನ್ನು ಪರಿಶೀಲಿಸಿದಾಗ ಶೇ 37 ರಷ್ಟು ಅಧಿಕ ಮಳೆ ಆಗಿದೆ. ವಾಡಿಕೆ ಪ್ರಕಾರ 388 ಮಿಲಿಮೀಟರ್‌ ಮಳೆ ಆಗಬೇಕಿತ್ತು. ಆದರೆ, 532 ಮಿಲಿಮೀಟರ್‌ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT