ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯ ಸ್ಫುರಿಸಿದ ರಂಜಾನ್‌

ಎಲ್ಲೆಡೆಯಲ್ಲೂ ಸಂಭ್ರಮದ ಈದ್‌ ಉಲ್‌ ಫಿತ್ರ್‌ ಹಬ್ಬದ ಆಚರಣೆ
Last Updated 5 ಜೂನ್ 2019, 15:41 IST
ಅಕ್ಷರ ಗಾತ್ರ

ರಾಯಚೂರು: ರಂಜಾನ್‌ ಮಾಸದ ಕೊನೆಯ ದಿನದಂದು ಜಿಲ್ಲೆಯ ವಿವಿಧೆಡೆ ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

30 ದಿನಗಳ ನಿರಂತರ ಉಪವಾಸ ವ್ರತಾಚರಣೆ ಮೂಲಕ ಅನುಭವ ಮಾಡಿಕೊಂಡ ಹಸಿವು, ನೀರಡಿಕೆ ಮಹತ್ವ ಹಾಗೂ ಈ ಮೂಲಕ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣಗಳನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪವನ್ನು ಮುಸ್ಲಿಮ ಬಾಂಧವರು ಮಾಡಿದರು. ಇದಕ್ಕಾಗಿ ಈದ್ಗಾ ಮೈದಾನಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗ್ರಂಥ ಖುರಾನ್‌ ಸಂದೇಶಗಳನ್ನು ಆಲಿಸಿದರು.

ಜಿಲ್ಲಾ ಕೋರ್ಟ್‌ ಸಂಕೀರ್ಣದ ಮುಂಭಾಗದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ಕೋರಿದರು. ಪ್ರಾರ್ಥನೆಯಲ್ಲಿ ಅಬಾಲವೃದ್ಧರೆಲ್ಲರೂ ಭಾಗಿಯಾಗಿದ್ದರು. ಎಲ್ಲರೂ ಶುಭ್ರ ವಸ್ತ್ರ ಧರಿಸಿದ್ದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ವಿಶೇಷವಾಗಿ ಗಮನ ಸೆಳೆದರು.

ಮುಸ್ಲಿಂ ಬಾಂಧವರಿಗೆ ‘ಈದ್‌ ಮುಬಾರಕ್‌’ ಹೇಳುವುದಕ್ಕಾಗಿ ಈದ್ಗಾ ಮೈದಾನದಲ್ಲಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು. ಜಿಲ್ಲಾಧಿಕಾರಿ ಶರತ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಮಾಜಿ ಶಾಸಕ ಸೈಯದ್‌ ಯಾಸೀನ್‌ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೈಕುಲುಕಿ ಹಬ್ಬದ ಶುಭಾಶಯ ಕೋರಿದರು.

ರಂಜಾನ್‌ ಹಬ್ಬದ ಶುಭಾಶಯ ಕೋರುವ ಸಂದೇಶ ಇರುವ ಫ್ಲೆಕ್ಸ್‌ಗಳುಎಲ್ಲೆಡೆಯಲ್ಲೂ ಗಮನ ಸೆಳೆದವು. ಬಸವೇಶ್ವರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಟಿಪ್ಪು ಸುಲ್ತಾನ್‌ ಸರ್ಕಲ್‌, ಗಂಜ್‌ ಸರ್ಕಲ್‌, ತೀನ್‌ ಕಂದಿಲ್‌, ಮಹಾವೀರ್‌ ಸರ್ಕಲ್‌, ಪಟೇಲ್‌ ಚೌಕ್‌, ಆರ್‌ಟಿಒ ಸರ್ಕಲ್‌, ರೈಲ್ವೆ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಕಡೆಗಳಲ್ಲಿ ‘ಈದ್‌ ಮುಬಾರಕ್‌’ ಸಂದೇಶದ ಫ್ಲೆಕ್ಸ್‌ಗಳು ರಾರಾಜಿಸಿದವು. ಕೆಲವು ವ್ಯಾಪಾರಿ ಮಳಿಗೆಗಳ ಎದುರು ಕೂಡಾ ಶುಭಾಶಯ ಕೋರುವ ‘ಈದ್‌ ಮುಬಾರಕ್‌’ ಕಟೌಟ್‌ಗಳು ವಿದ್ಯುತ್‌ ದೀಪಾಲಂಕಾರದೊಂದಿಗೆ ಕಂಗೊಳಿಸಿದವು.

ವಿಶೇಷ ಭೋಜನ:ರಂಜಾನ್‌ ಹಬ್ಬದ ನಿಮಿತ್ತ ಮುಸ್ಲಿಮರ ಮನೆಗಳಲ್ಲಿ ಸಿಹಿ ಹಾಗೂ ಖಾರ ಬೋಜನಗಳು ವಿಶೇಷವಾಗಿದ್ದವು. ಕೆಲವರು ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT