ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರನ್ನು ಬೀದಿಪಾಲು ಮಾಡಲು ಸಂಚು: ಕೆ. ಸೋಮಶೇಖರ್‌

ವಿಶ್ವ ಕಾರ್ಮಿಕರ ದಿನಾಚರಣೆ, ವಿವಿಧೆಡೆ ಕಾರ್ಮಿಕ ಸಂಘದಿಂದ ಮೆರವಣಿಗೆ
Last Updated 1 ಮೇ 2019, 12:58 IST
ಅಕ್ಷರ ಗಾತ್ರ

ರಾಯಚೂರು: ದೇಶದ ಕಾರ್ಮಿಕ ವರ್ಗವನ್ನು ಬೀದಿಪಾಲು ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಅಸಂಘಟಿತ ವಲಯದ ಕಾರ್ಮಿಕರ ಜೀವನ ನಿತ್ಯ ನರಕ ಮಾಡಲಾಗಿದೆ ಎಂದು ಆಲ್‌ ಇಂಡಿಯಾ ಯುನಿಯನ್‌ ಆಫ್‌ ಟ್ರೇಡ್‌ ಯುನಿಯನ್‌ ಕಾಂಗ್ರೆಸ್‌ (ಎಐಯುಟಿಯುಸಿ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್‌ ಹೇಳಿದರು.

ನಗರದ ಮಹಿಳಾ ಸಮಾಜ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಿಎಸ್‌ಎನ್‌ಎಲ್ 54 ಸಾವಿರ ನೌಕರರನ್ನು ಮನೆಗೆ ಕಳುಹಿಸಲು ಸಜ್ಜಾಗಿದೆ. ಸುಮಾರು ₹1.76 ಲಕ್ಷ ನೌಕರರ ಸಂಬಳ ಬಾಕಿ ಉಳಿಸಿಕೊಂಡಿದೆ. ಎಚ್‌ಎಎಲ್ ತನ್ನ ನೌಕರರಿಗೆ ಸಂಬಳ ನೀಡಲು ₹1 ಸಾವಿರ ಕೋಟಿ ಸಾಲ ಪಡೆದಿದೆ. ಜೆಟ್ ಏರ್‌ವೇಸ್ ಹಠಾತ್ತಾಗಿ 20 ಸಾವಿರ ನೌಕರರನ್ನು ಬೀದಿಪಾಲು ಮಾಡಿದೆ. ಇವು ಕೆಲವು ಉದಾಹರಣೆಗಳಷ್ಟೇ ಎಂದು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಪರಿಸ್ಥಿತಿ ಹೀಗಿದೆ. ಇನ್ನು ಅಸಂಘಟಿತ ವಲಯದ ಕಾರ್ಮಿಕರ ಪರಿಸ್ಥಿತಿಯು ನಿತ್ಯನರಕ. ಈ ಸಂದರ್ಭದಲ್ಲಿ ಐತಿಹಾಸಿಕ ಮೇ ದಿನದ ಕಾರ್ಮಿಕ ಹೋರಾಟವನ್ನು ನೆನೆಯುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಒಂದು ದಶಕದಲ್ಲಿ ದೇಶದ ಕಾರ್ಪೋರೇಟ್ ಮನೆತನಗಳಿಗೆ ಕೇಂದ್ರ ಸರ್ಕಾರಗಳು ನೀಡಿರುವ ತೆರಿಗೆ ವಿನಾಯಿತಿ ಸುಮಾರು ₹60 ಲಕ್ಷ ಕೋಟಿ. ಇದಲ್ಲದೆ ಪ್ರತಿ ವರ್ಷ ದೊಡ್ಡ ದೊಡ್ಡ ಬ್ಯಾಂಕ್‌ಗಳು ಎನ್‌ಪಿಎ/ಬ್ಯಾಡ್ ಲೋನ್ಸ್ ಹೆಸರಲ್ಲಿ ಕಾರ್ಪೋರೇಟ್ ಮನೆತನಗಳ ಲಕ್ಷಾಂತರ ಕೋಟಿ ಸಾಲಮನ್ನಾ ಮಾಡುತ್ತವೆ. ಇದೇ ವ್ಯವಸ್ಥೆಯಲ್ಲಿ ಅನ್ನದಾತ ರೈತರು ಸಾಲ ತೀರಿಸಲಾಗದೆ ನೇಣಿಗೆ ಶರಣಾಗುತ್ತಾರೆ. ಇದು ಎಂತಹ ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಇಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳ ಆರ್ಥಿಕ ನೀತಿಗಳಲ್ಲಿ ಮೂಲಭೂತ ವ್ಯತ್ಯಾಸಗಳಿಲ್ಲ. ಈ ಸತ್ಯವನ್ನು ದೇಶದ ಕಾರ್ಮಿಕರು-ರೈತರು ಮತ್ತು ಮಧ್ಯಮ ವರ್ಗದ ನೌಕರರು ತಿಳಿಯಬೇಕು ಎಂದರು.

ಗುತ್ತಿಗೆ ಪದ್ಧತಿಯನ್ನು ನಿಯಂತ್ರಿಸಿ ಕ್ರಮೇಣ ನಿಷೇಧಿಸುವ ಬದಲಾಗಿ ಅದನ್ನೇ ನಿಯಮಿತಗೊಳಿಸಲಾಗಿದೆ. ಸರ್ಕಾರಿ ಇಲಾಖೆಗಳಲ್ಲೂ ಸಹ ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ಯಾವ ಅಡೆತಡೆ ಇಲ್ಲದೆ ಸಾಗುತ್ತಿದೆ. ಕನಿಷ್ಠ ವೇತನ, ಇತರೆ ಸೌಲಭ್ಯಗಳನ್ನು ನೀಡದೆ ಬಿಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ದೇಶದ ಉದ್ದಗಲಕ್ಕೂ ಕಾರ್ಮಿಕರ ಶೋಷಣೆ ಮುಂದುವರಿದಿದೆ ಎಂದು ಹೇಳಿದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ವೀರೇಶ್.ಎನ್.ಎಸ್ ಮಾತನಾಡಿ ಪ್ರಪಂಚದಾದ್ಯಂತ ಕಾರ್ಮಿಕರು ಮಾಲೀಕ ವರ್ಗದ, ಆಳುವವರ ವಿರುದ್ಧ ಸಿಡಿದೇಳುತ್ತಿದ್ದಾರೆ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ ಮುಂದುವರೆದ ದೇಶಗಳಿಂದ ಹಿಡಿದು ಎಲ್ಲಾ ಕಡೆ ದುಡಿಯುವ ಜನತೆ ಬಂಡವಾಳಿಗರ ವಿರುದ್ಧ ಸಮರ ಸಾರುತ್ತಿದ್ದಾರೆ. ದೊಡ್ಡ ಕಾರ್ಮಿಕ ಸಂಘಗಳೆನಿಸಿಕೊಂಡ ಟ್ರೇಡ್ ಯೂನಿಯನ್ ಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟಿವೆ. ರಾಜಿ ಮಾಡಿಸುವ ದಲ್ಲಾಳಿಗಳಾಗಿವೆ ಎಂದರು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿ, ಮೇ ದಿನ ಕಾರ್ಮಿಕರ ತ್ಯಾಗ ಬಲಿದಾನದ ಸಂಕೇತವಾಗಿದೆ. ಈ ಮಹಾನ್ ಚಳವಳಿಯಿಂದ ಸ್ಫೂರ್ತಿ ಪಡೆದು ಕಾರ್ಮಿಕರು ಎಲ್ಲಾ ರೀತಿಯ ಶೋಷಣೆ ತೊಡೆದು ಹಾಕಬೇಕು. ಬಂಡವಾಳಶಾಹಿ ವ್ಯವಸ್ಥೆಗೆ ಗೋರಿ ತೋಡಬೇಕು ಎಂದು ಹೇಳಿದರು.

ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್, ಸದಸ್ಯರಾದ ಶಿವರಾಜ, ಅಣ್ಣಪ್ಪ, ಶಿಲ್ಪಾ ಯೂನಿಯನ್ ಪ್ರದಾನ ಕಾರ್ಯದರ್ಶಿ ಸಲೀಮ್, ರಾಯಕೆಮ್ ಮೆಡಿಕೇರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಸವರಾಜ, ಯಲ್ಲಪ್ಪ, ಆಶಾ ಕಾರ್ಯಕರ್ತೆಯರ ಸಂಘದ ಈರಮ್ಮ, ಕಿರುಜಲ ವಿದ್ಯುತ್ ನೌಕರರ ಸಂಘದ ಶಿವರಾಜ ಪಾಟೀಲ ಇದ್ದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಶಿಲ್ಪಾ ಮೆಡಿಕೇರ್ ಸ್ಟಾಫ್ & ವರ್ಕರ್ಸ್ ಯೂನಿಯನ್, ಕೆಪಿಟಿಸಿಎಲ್ ವಿ.ವಿ & ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘ, ಕಿರುಜಲ ವಿದ್ಯುತ್ ಗುತ್ತಿಗೆ ನೌಕರರ ಸಂಘ, ರಾಯಕೆಮ್ ಮೇಡಿಕೇರ್ ನೌಕರರ ಸಂಘ, ಕೆಜಿಬಿವಿ ಗುತ್ತಿಗೆ ನೌಕರರ ಸಂಘ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT