ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು ಕ್ಷೇತ್ರ; ಬಿಜೆಪಿ ಅಭ್ಯರ್ಥಿಗಾಗಿ ಹುಡುಕಾಟ

Last Updated 5 ಫೆಬ್ರುವರಿ 2023, 7:41 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿರುವ ಸಿಂಧನೂರಿನಲ್ಲಿ 1989 ರಿಂದಲೂ ಕಾಂಗ್ರೆಸ್‌–ಜನತಾದಳ ನಡುವೆ ಸೆಣಸಾಟ ಮುಂದುವರಿದಿದ್ದು, ಈ ಬಾರಿಯೂ ಅದೇ ಚಿತ್ರಣವಿದೆ. ಬಿಜೆಪಿ ಅಭ್ಯರ್ಥಿ ಹುಡುಕಾಟದಲ್ಲಿದೆ. ಕಲ್ಯಾಣ ರಾಜ್ಯ ‍ಪ್ರಗತಿ ಪಕ್ಷ (ಕೆಆರ್‌ಪಿಪಿ) ದಿಂದಲೂ ಪ್ರಭಾವಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಟ್ಟುಹಾಕಲಾಗಿದೆ.

ಹಾಲಿ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಅವರು ಸಕ್ರಿಯವಾಗಿ ಜನಸಂಪರ್ಕ ಕಾಯ್ದುಕೊಂಡಿದ್ದಾರೆ. ಪಕ್ಷ ನಿರ್ದೇಶಿತ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಗ್ರಾಮವಾಸ್ತವ್ಯಗಳನ್ನು ಮಾಡಿಕೊಂಡು ಮತ್ತೆ ಬೆಂಬಲ ಕೋರಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯು ಸಿಂಧನೂರಿನಲ್ಲಿ ಭಾರಿ ಯಶಸ್ವಿ ಆಗಿದೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ನಾಡಗೌಡ ಅವರಿಗೆ ಸಚಿವಸ್ಥಾನ ಕೊಡಲಾಗಿತ್ತು. ಆನಂತರ ಸರ್ಕಾರ ಬಿದ್ದುಹೋದರೂ ಜನರೊಂದಿಗೆ ಒಡನಾಟವನ್ನು ಎಂದಿನಂತೆ ಉಳಿಸಿ
ಕೊಂಡಿದ್ದಾರೆ. ಈ ಸಲ ಮತ್ತೊಮ್ಮೆ ಜನರು ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಅವರಲ್ಲಿದೆ.

1989 ರಿಂದ ಸತತ ಏಳುಬಾರಿ ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ನಾಲ್ಕು ಬಾರಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಅವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. 2018 ರಲ್ಲಿ ಸೋಲು ಅನುಭವಿಸಿದರೂ ತಮ್ಮದೇ ಆದ ಪ್ರಭಾವ ಉಳಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸೋಲು–ಗೆಲುವು ಎರಡನ್ನೂ ನೋಡಿರುವ ಅವರು ಈ ಸಲ ಗೆಲ್ಲುವುದಕ್ಕೆ ತಮ್ಮ ಸರದಿ ಇದೆ ಎಂದು ಕಾದಿದ್ದಾರೆ. ಆದರೆ, ಕಾಂಗ್ರೆಸ್‌ ಟಿಕೆಟ್‌ಗಾಗಿ ಯುವ ಮುಖಂಡ ಬಸನಗೌಡ ಬಾದರ್ಲಿ ಹಾಗೂ ಕರಿಯಪ್ಪ ಅವರು ಪ್ರಭಾವ ಬೀರುತ್ತಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಹಿರಿಯರು ಯಾರಿಗೆ ಒಲವು ತೋರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ಜನಸ್ಪಂದನೆ ಇದ್ದು, ಸೂಕ್ತ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ. ಇದುವರೆಗೂ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆಯುವುದಕ್ಕೂ ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ, ಪ್ರಾಬಲ್ಯವಿರುವ ಹೊರಜಿಲ್ಲೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲುವಿನ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಯೋಜನೆಯನ್ನು ಬಿಜೆಪಿಯವರು ಮಾಡುವುದನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಟಿಕೆಟ್‌ಗಾಗಿ ಕೆಲವು ಉದ್ಯಮಿಗಳು ಈಗಾಗಲೇ ಒಲವು ತೋರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ಕೊಲ್ಲಾ ಶೇಷಗಿರಿರಾವ್‌ ಮತ್ತೊಮ್ಮೆ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಸಿಂಧನೂರು ಕ್ಷೇತ್ರದ ಮಟ್ಟಿಗೆ ಬಿಜೆಪಿ ನಡೆ ಇನ್ನೂ ಗುಟ್ಟಾಗಿದೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿರುವ ಕೆ.ವಿರೂಪಾಕ್ಷಪ್ಪ ಕೂಡಾ ಪ್ರಬಲ ಅಭ್ಯರ್ಥಿ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT