ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ, ‍ಡೆಸ್ಕ್‌ ಸ್ಯಾನಿಟೈಸ್‌ ಕಡ್ಡಾಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಬಿ.ಶರತ್‌ ಸೂಚನೆ
Last Updated 20 ಜೂನ್ 2020, 15:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೋವಿಡ್–19 ಉಪಟಳ ನಿಲ್ಲದ ಕಾರಣ, ಜೂನ್‌ 25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಪ್ರತಿ ಪರೀಕ್ಷೆ ಮುಗಿದ ಮೇಲೆ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿ ಹಾಗೂ ಪೀಠೋಪಕರಣ ಸ್ಯಾನಿಟೈಸ್ ಮಾಡುವುದು ಕಡ್ಡಾಯ’ ಎಂದು ಜಿಲ್ಲಾಧಿಕರಿ ಬಿ.ಶರತ್‌ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು. ಪರೀಕ್ಷೆಗೂ ಮೊದಲು ಮತ್ತು ನಂತರದಲ್ಲಿ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಶೌಚಾಲಯಗಳ ಬಳಿ ಕೈತೊಳೆದುಕೊಳ್ಳಲು ಸೋಪಿನ ವ್ಯವಸ್ಥೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಕೋವಿಡ್‌ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ಅಥವಾ ಕಂಟೇನ್ಮೆಂಟ್ ವಲಯದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕವಾಗಿ ಎರಡು ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಯಾವುದೇ ಪರೀಕ್ಷಾ ಕೇಂದ್ರ ಕಂಟೇನ್ಮೆಂಟ್ ವಲಯದೊಳಗೆ ಬಂದರೆ, ಚರ್ಚಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಕುರಿತು ಮೂಲ ಪರೀಕ್ಷಾ ಕೇಂದ್ರದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು’ ಎಂದರು.

‘ಪ್ರತಿ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್‌ ತೆರೆಯಬೇಕು. ಒಂದು ವೇಳೆ ವಿದ್ಯಾರ್ಥಿ ‘ಕೋವಿಡ್ ಪಾಸಿಟಿವ್’ ಎಂದು ಈಗಾಗಲೇ ಗುರುತಿಸಲ್ಪಟ್ಟಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಿ ಅದನ್ನು ‘ಪ್ರಥಮ ಅವಕಾಶ’ ಎಂದು ಪರಿಗಣಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ ಮಾತನಾಡಿ, ‘ಪ್ರತಿ ತಾಲ್ಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಇಡಬೇಕು’ ಎಂದು ಸೂಚಿಸಿದರು.

‘ಪ್ರವೇಶ ಪತ್ರಗಳನ್ನು ತೋರಿಸಿ, ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಬಸ್‍ನಲ್ಲಿ ಓಡಾಡಬಹುದಾಗಿದೆ. ಸಾರಿಗೆ ವ್ಯವಸ್ಥೆ ಕುರಿತು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸಹಾಯವಾಣಿ ತೆರೆದು ಪ್ರಚಾರ ಮಾಡಬೇಕು. ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ವಿದ್ಯಾರ್ಥಿಯು ಮುಖಗವಸು ಧರಿಸಿರಬೇಕು. ಕನಿಷ್ಠ ಒಂದು ಮೀಟರ್ ಆಂತರ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರೋಗ್ಯ ಇಲಾಖೆ, ಎನ್‍ಇಕೆಎಸ್‍ಆರ್‍ಟಿಸಿ, ಜೆಸ್ಕಾಂ ಅಧಿಕಾರಿಗಳು ಇದ್ದರು.

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಮಕ್ಕಳಿಗೆ ಪ್ರತ್ಯೇಕ ಕೋಣೆ

ಕಂಟೇನ್ಮೆಂಟ್‌ ಝೋನ್ ಮತ್ತು ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದಲ್ಲಿ, ಅವರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ಕೋಣೆ ಕಾಯ್ದಿರಿಸಲಾಗಿದೆ ಎಂದು ಶರತ್ ತಿಳಿಸಿದರು.

ಪರೀಕ್ಷೆಗೆ ಬರುವ ಎಲ್ಲಾ ಮಕ್ಕಳಿಗೆ ಆರೋಗ್ಯದ ಮೇಲೆ ಗಮನ ನೀಡಲು ಪರೀಕ್ಷಾ ಕ್ಳೆಂದ್ರದಲ್ಲಿ ಆರೋಗ್ಯ ತಂಡ ನಿಯೋಜಿಸಲಾಗುತ್ತದೆ. ಮುಂಜಾಗ್ರತವಾಗಿ ಎಲ್ಲಾ ಸಾರಿಗೆ ಬಸ್‍ಗಳನ್ನು ಸಹ ಸ್ಯಾನಿಟೈಸ್ ಮಾಡಲು ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT