ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: 20 ವರ್ಷ ಕಳೆದರೂ ಬಳಕೆಯಾಗದ ಅರಣ್ಯ ಇಲಾಖೆ ವಸತಿ ಗೃಹ

Published 19 ಜನವರಿ 2024, 5:31 IST
Last Updated 19 ಜನವರಿ 2024, 5:31 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದಲ್ಲಿನ ವಿವಿಧ ಸರ್ಕಾರಿ ಕಟ್ಟಡಗಳು ದಶಕಗಳಿಂದ ನಿರುಪಯುಕ್ತವಾಗಿದ್ದು ಸಂಬ್ಬಂದಪಟ್ಟ ಇಲಾಖೆ ಅಧಿಕಾರಿಗಳು ಅವುಗಳ ದುರಸ್ತಿ ಹಾಗೂ ಬಳಕೆಯ ಬಗ್ಗೆ ಕಾಳಜಿ ವಹಿಸದಿರುವುದು ಅಚ್ಚರಿ ಮೂಡಿಸಿದೆ.

ಇಲ್ಲಿನ ಅಂಬೇಡ್ಕರ್‌ ನಗರದಲ್ಲಿ ಗುಡ್ಡದ ಮೇಲೆ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಿದ ಸಿಬ್ಬಂದಿ ವಸತಿ ಗೃಹಗಳನ್ನು ಸುಮಾರು 20 ವರ್ಷ ಕಳೆದರೂ ಬಳಕೆ ಮಾಡಿಲ್ಲ. ವಸತಿ ಗೃಹಗಳಲ್ಲಿ ಯಾರೂ ವಾಸಿಸದೆ ಇರುವುದು ಮತ್ತು ಅವುಗಳ ನಿರ್ವಹಣೆ ಬಗ್ಗೆ ಕಾಳಜಿ ವಹಿಸದ ಕಾರಣ ಬಹುತೇಕ ಶಿಥಿಲಾವಸ್ಥೆ ತಲುಪಿವೆ.

ಇಲ್ಲಿನ ಪಶು ಆಸ್ಪತ್ರೆ ಪಕ್ಕದಲ್ಲಿನ ಲೊಕೋಪಯೋಗಿ ಇಲಾಖೆ ಸಿಬ್ಬಂದಿ ವಸತಿ ಗೃಹ ಶಿಥಿಲಾವಸ್ಥೆ ತಲುಪಿದೆ, ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ನಿರ್ಮಿಸಿದ ಎರಡು ವಾಣಿಜ್ಯ ಮಳಿಗೆಗಳನ್ನು ಪಂಚಾಯಿತಿ ಸಾಮಗ್ರಿ ದಾಸ್ತಾನು ಮಾಡಿ ಗೋದಾಮುಗಳಂತೆ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ರೈತ ಸಂಪರ್ಕ ಕೇಂದ್ರವಾಗಿದ್ದ ಸಹಾಯಕ ಕೃಷಿ ಅಧಿಕಾರಿಗಳ ವಸತಿ ಗೃಹ ಪಾಳು ಬಿದ್ದಿದೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿರುವ ಶಿಕ್ಷಕರ ವಸತಿ ಗೃಹಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ, ಕಟ್ಟಡ ಹಾಳಾಗುವುದರ ಜತೆಗೆ ಸಾರ್ವಜನಿಕರು ಕಸಕಡ್ಡಿ ಹಾಕುವುದು ಮತ್ತು ಮಲಮೂತ್ರ ವಿಸರ್ಜನೆ ಮಾಡುವುದರಿಂದ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಈ ವಸತಿ ಗೃಹಗಳು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡಿದ್ದು ಗಲೀಜು ವಾತಾವರಣದಿಂದ ಶಾಲಾ ಮಕ್ಕಳು ಮುಜುಗರಪಡುವಂತಾಗಿದೆ.

ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ವಿವಿಧ ಇಲಾಖೆಗಳ ಕಟ್ಟಡಗಳು ಅಧಿಕಾರಿಗಳ ನಿರ್ಲಕ್ಷದಿಂದ ಹಾಳಾಗುತ್ತಿವೆ, ಇನ್ನೊಂದೆಡೆ ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಮತ್ತಿತರ ಕಚೇರಿಗಳು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

‘ಅರಣ್ಯ ಇಲಾಖೆ ಸಿಬ್ಬಂದಿ ವಸತಿ ಗೃಹಗಳ ಬಳಕೆಯ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಅಂಬೇಡ್ಕರ್‌ ನಗರದಲ್ಲಿನ ಸಮುದಾಯ ಭವನ ಶಿಥಿಲಾವಸ್ಥೆ ತಲುಪಿದ್ದು ದುರಸ್ತಿ ಮಾಡುವಂತೆ ಮನವಿ ಸಲ್ಲಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್. ನೆಮ್ಮದಿ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರಗಳು ಹಳೇ ಬಸ್‌ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿದ್ದು ಹಳ್ಳಿಯಿಂದ ಬರುವ ಸಾರ್ವಜನಿಕರು ಕಚೇರಿಗಳಿಗೆ ಹೋಗಲು ಪರದಾಡುತ್ತಾರೆ. ಸಂಧ್ಯಾ ಸುರಕ್ಷಾ ಮತ್ತಿತರ ಅರ್ಜಿ ಸಲ್ಲಿಸಲು ಬರುವ ವೃದ್ದರು ಅಷ್ಟು ದೂರ ಕಾಲ್ನಡಿಗೆಯಲ್ಲಿ ಹೋಗಬೇಕಿದೆ ಇನ್ನೊಂದಡೆ ಸರ್ಕಾರಿ ಕಟ್ಟಡಗಳು ನಿರುಪಯುಕ್ತವಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಚರ್ಚಿಸಿ ಹಳೇ ಕಟ್ಟಡಗಳನ್ನು ದುರಸ್ತಿ ಮಾಡಿ ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಕುರಿತು ಯೋಚಿಸಬೇಕು’ ಎಂದು ಸಂಘಟನೆ ಮುಖಂಡ ಅಲ್ಲಮಪ್ರಭು ಆಗ್ರಹಿಸಿದರು.

ಕವಿತಾಳದಲ್ಲಿ ಪಾಳು ಬಿದ್ದ ಶಿಕ್ಷಕರ ವಸತಿ ಗೃಹ ಕಟ್ಟಡ
ಕವಿತಾಳದಲ್ಲಿ ಪಾಳು ಬಿದ್ದ ಶಿಕ್ಷಕರ ವಸತಿ ಗೃಹ ಕಟ್ಟಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT