ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾನೈಟ್‌ ಗಣಿ ಮಾಲೀಕರಿಗೂ ‘ಕೋವಿಡ್‌’ ಭೀತಿ

Last Updated 29 ಫೆಬ್ರುವರಿ 2020, 19:24 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್‌ ಗ್ರ್ಯಾನೈಟ್ ಕಲ್ಲು ಖರೀದಿಗಾಗಿಚೀನಾ ಹಾಗೂ ಜಪಾನ್‌ ದೇಶಗಳಿಂದ ಉದ್ಯಮಿಗಳು ಬಾರದಿರುವುದು ಗಣಿ ಮಾಲೀಕರನ್ನು ಸಂಕಷ್ಟಕ್ಕೀಡು ಮಾಡಿದೆ!

ಎರಡು ವರ್ಷಗಳ ಹಿಂದೆ ಜಪಾನ್‌ ಹಾಗೂ ಚೀನಾ ದೇಶಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದ್ದರಿಂದ ಗ್ರ್ಯಾನೈಟ್‌ ಕಲ್ಲುಗಳ ಬೇಡಿಕೆ ಅರ್ಧದಷ್ಟು ಕುಸಿದಿತ್ತು. ಇದೀಗ ಕೋವಿಡ್‌–19 (ಕೊರೊನಾ) ವೈರಸ್‌ ದಾಳಿಯಿಂದ ಬೇಡಿಕೆ ಸಂಪೂರ್ಣ ನೆಲಕಚ್ಚಿದೆ. ಪರವಾನಗಿ ಪಡೆದಿರುವ 45 ಕಲ್ಲುಗಣಿಗಳ ಪೈಕಿ 20 ಗಣಿಗಳು ಬೇಡಿಕೆಯಿಲ್ಲದೆ ಎರಡು ವರ್ಷಗಳ ಹಿಂದೆಯೇ ಸ್ಥಗಿತವಾಗಿದ್ದವು. ಇನ್ನುಳಿದ 25 ಗಣಿಗಳು ವೈರಸ್‌ನ ಪರೋಕ್ಷ ಪರಿಣಾಮದಿಂದ ಕಾರ್ಯ ನಿಲ್ಲಿಸಿವೆ.

ಪ್ರತಿ ವರ್ಷ 25 ರಿಂದ 30 ಸಾವಿರ ಕ್ಯೂಬಿಕ್‌ ಮೀಟರ್‌ ಗ್ರ್ಯಾನೈಟ್‌ ಕಲ್ಲುಗಳು ಚೀನಾ ಮತ್ತು ಜಪಾನ್‌ ದೇಶಗಳಿಗೆ ರಫ್ತಾಗುತ್ತಿತ್ತು. ಬೇಡಿಕೆ ಕುಸಿತವಾದ ನಂತರ 2018–19ನೇ ಸಾಲಿನಲ್ಲಿ 16,211 ಕ್ಯೂಬಿಕ್‌ ಮೀಟರ್‌ ಮತ್ತು 2019–20 (ಫೆಬ್ರುವರಿ ಅಂತ್ಯದವರೆಗೂ) 12,331 ಕ್ಯೂಬಿಕ್‌ ಮೀಟರ್‌ ಗ್ರ್ಯಾನೆಟ್ ಕಲ್ಲು ರಫ್ತು ಮಾಡಲಾಗಿದೆ. ಅದರಲ್ಲೂ ಕೋವಿಡ್‌ ವೈರಸ್‌ ಭೀತಿಯಿಂದ ರಫ್ತು ನಿಂತುಹೋಗಿದ್ದು, ದೇಶಿ ಮಾರುಕಟ್ಟೆಗೆ ನಾಮಕಾವಸ್ತೆ ಗ್ರ್ಯಾನೈಟ್‌ ಹೋಗುತ್ತಿದೆ ಎನ್ನುವುದು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿವರಣೆ.

2019ರ ಅಕ್ಟೋಬರ್‌ ಮತ್ತು ನವೆಂಬರ್‌ ತಲಾ 900 ಕ್ಯೂಬಿಕ್‌ ಮೀಟರ್‌ ಗ್ರ್ಯಾನೈಟ್ ಕಲ್ಲು ರಫ್ತಾಗಿದೆ. ಡಿಸೆಂಬರ್‌ ಕೊನೆಯಲ್ಲಿ ವೈರಸ್‌ ಭೀತಿ ಕಾಣಿಸಿಕೊಂಡಿದೆ. ಹೀಗಾಗಿ 2020 ರ ಫೆಬ್ರುವರಿಯಲ್ಲಿ 305 ಕ್ಯೂಬಿಕ್‌ ಮೀಟರ್‌ ಮಾತ್ರ ಗ್ರ್ಯಾನೈಟ್ ಕಲ್ಲು ದೇಶಿಯವಾಗಿ ಮಾರಾಟವಾಗಿದೆ. 2018–19ನೇ ಸಾಲಿನಲ್ಲಿ ₹2.68 ಕೋಟಿ ರಾಜಧನ ಹಾಗೂ 2019–20 (ಫೆಬ್ರುವರಿವರೆಗೂ) ₹1.74 ಕೋಟಿ ರಾಜಧನ ಗ್ರ್ಯಾನೈಟ್ ಕಲ್ಲು ಗಣಿಗಾರಿಕೆಯಿಂದ ಸಂಗ್ರಹವಾಗಿದೆ. ಎರಡು ವರ್ಷಗಳ ಹಿಂದೆ ವರ್ಷ ₹4 ಕೋಟಿವರೆಗೂ ರಾಜಧನ ಸಂಗ್ರಹವಾಗುತ್ತಿತ್ತು ಎನ್ನುತ್ತಾರೆ ಅಧಿಕಾರಿಗಳು.

ಮುದಗಲ್‌ನಲ್ಲಿ ‘ಗ್ರೇ ಗ್ರ್ಯಾನೈಟ್ ಕಲ್ಲು’ ಮತ್ತು ಪಕ್ಕದ ಆದಾಪುರ, ಮಾಕಾಪುರದಲ್ಲಿ ‘ಪಿಂಕ್‌ ಗ್ರ್ಯಾನೈಟ್ ಕಲ್ಲು’ ಹೇರಳವಾಗಿದೆ. ಗ್ರೇ ಗ್ರ್ಯಾನೈಟ್ ಕಲ್ಲು ಒಂದು ಕ್ಯೂಬಿಕ್‌ ಮೀಟರ್‌ಗೆ ₹35 ರಿಂದ ₹40 ಸಾವಿರ, ಪಿಂಕ್‌ ಗ್ರ್ಯಾನೈಟ್ ಕಲ್ಲು ₹50 ಸಾವಿರವರೆಗೂ ಮಾರಾಟವಾಗುತ್ತದೆ. ಕರಕುಶಲಗಾರರು ಮತ್ತು ಅಗ್ಗದ ವಿದ್ಯುತ್‌ ಸೌಲಭ್ಯ ಹೊಂದಿರುವ ಚೀನಾ ಮತ್ತು ಜಪಾನ್‌ ದೇಶಗಳಲ್ಲಿ ಮಾತ್ರ ಈ ಗ್ರ್ಯಾನೈಟ್ ಕಲ್ಲುಗಳಿಗೆ ಮೌಲ್ಯವರ್ಧನೆ ಮಾಡಲಾಗುತ್ತಿದೆ. ಪ್ರಪಂಚದ ಇತರ ರಾಷ್ಟ್ರಗಳಿಗೆ ಗ್ರ್ಯಾನೈಟ್ ಮೌಲ್ಯವರ್ಧಿತ ಉತ್ಪನ್ನಗಳು ಅಲ್ಲಿಂದಲೇ ರಫ್ತಾಗುತ್ತವೆ. ವಿದೇಶಗಳಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಮತ್ತು ಸಮಾಧಿ ನಿರ್ಮಾಣಕ್ಕೆ ಮುದಗಲ್‌ ಭಾಗದ ಗ್ರ್ಯಾನೈಟ್ ಹೆಚ್ಚಾಗಿ ಬಳಕೆ ಮಾಡುತ್ತಾರೆ.

‘ಗ್ರ್ಯಾನೈಟ್ ಗಣಿಗಾರಿಕೆ ಸ್ಥಗಿತವಾಗಿದ್ದರಿಂದ 500 ಕುಟುಂಬಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಬೇಡಿಕೆಯಿದ್ದರೆ ಮಾತ್ರ ಗಣಿಗಾರಿಕೆ ನಡೆಯುತ್ತದೆ. ಮುಂಚಿತವಾಗಿಯೇ ಕಲ್ಲು ಹೊರತೆಗೆದರೆ, ಹೊಳಪು ಕಡಿಮೆಯಾಗಿ ಮೌಲ್ಯ ಕಳೆದುಕೊಳ್ಳುತ್ತದೆ. ಚೀನಾ, ಜಪಾನ್‌ ದೇಶಗಳ ಆರ್ಥಿಕತೆ ಚೇತರಿಸಿಕೊಂಡರೆ ಮಾತ್ರ ಮತ್ತೆ ಗ್ರ್ಯಾನೈಟ್ ಕಲ್ಲು ಗಣಿಗಾರಿಕೆ ಶುರುವಾಗುತ್ತದೆ. ಗಣಿಗಾರಿಕೆ ನಂಬಿಕೊಂಡು ಲಕ್ಷಾಂತರ ಮೌಲ್ಯದ ಯಂತ್ರಗಳನ್ನು ಖರೀದಿಸಿರುವ ಗಣಿ ಮಾಲೀಕರು ಬ್ಯಾಂಕ್‌ ಸಾಲ ಕಟ್ಟಲಾಗದೆ ಪೇಚಾಡಿಕೊಳ್ಳುತ್ತಿದ್ದಾರೆ’ ಎಂದು ಮುದಗಲ್‌ನ ನೊಬೆಲ್‌ ಗ್ರ್ಯಾನೈಟ್ ಕಲ್ಲು ಗಣಿ ಮಾಲೀಕ ದಾವೂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಚೀನಾ ಹಾಗೂ ಜಪಾನ್ ದೇಶಗಳ ಉದ್ಯಮಿಗಳು ಮಾತ್ರ ಮುದಗಲ್‌ ಗ್ರಾನೈಟ್ ಖರೀದಿಸುತ್ತಾರೆ. ಕೊರೊನಾ ವೈರಸ್‌ ಪರಿಣಾಮದಿಂದ ಗ್ರಾನೇಟ್‌ ಖರೀದಿಗೆ ಅವರು ಬರುತ್ತಿಲ್ಲ. ಗ್ರಾನೈಟ್ ಕಲ್ಲುಗಳಿಗೆ ಮತ್ತೆ ಬೇಡಿಕೆ ಬರುವುದಕ್ಕೆ ಹಲವು ವರ್ಷ ಕಾಯಬೇಕು.
-ದಾವೂದ್‌, ಮುದಗಲ್‌ ನೊಬೆಲ್‌ ಗ್ರಾನೇಟ್‌ ಗಣಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT