ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರಧಾನ್ಯ ಕಿಟ್‌ ಪಡೆಯಲು ನೂಕುನುಗ್ಗಲು

ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ವಿತರಣೆ
Last Updated 10 ಜುಲೈ 2021, 16:05 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್‌ ವಿತರಿಸಲು ಕಾರ್ಮಿಕ ಇಲಾಖೆಯು ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘುಲಾಠಿ ಬೀಸಿದ ಪ್ರಸಂಗ ಶನಿವಾರ ನಡೆಯಿತು.

ನಗರದ ರೈಲ್ವೆ ಕೆಳಸೇತುವೆ ಪಕ್ಕದ ಅಯ್ಯಪ್ಪಸ್ವಾಮಿ ದೇವಸ್ಥಾನ ಎದುರು ಆಹಾರಧಾನ್ಯದ ಕಿಟ್‌ ವಿತರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಸುಕಿನ 4 ಗಂಟೆಯಿಂದಲೇ ಕಾರ್ಮಿಕರು ಗುರುತಿನ ಚೀಟಿ ಹಿಡಿದುಕೊಂಡು ಸರದಿ ನಿಂತಿದ್ದರು. ಲಾರಿಯಲ್ಲಿ ಬಂದಿದ್ದ ಕಿಟ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ಗದ್ದಲ ಏರ್ಪಟ್ಟಿತು. ಕಾರ್ಮಿಕರ ಸಂಖ್ಯೆಗಿಂತಲೂ ಕಿಟ್‌ಗಳು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ನಾ ಮುಂದೆ ತಾ ಮುಂದೆ ಎಂದು ಕಾರ್ಮಿಕರು ನುಗ್ಗಿದರು. ನೂಕುನುಗ್ಗಲು ಉಂಟಾಗಿದ್ದರಿಂದ ಮಧ್ಯಾಹ್ನ ಪೊಲೀಸರು ಲಾಠಿ ಬೀಸಿ ಕಾರ್ಮಿಕರ ಗುಂಪು ಚದುರಿಸಿದರು.

ಕಾರ್ಮಿಕರನ್ನು ನಿಯಂತ್ರಿಸುವುದಕ್ಕಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು. ಪುರುಷ ಹಾಗೂ ಮಹಿಳಾ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿ ಸರದಿ ಮಾಡಿಸಲಾಗಿತ್ತು. ಆದರೂ ದಟ್ಟಣೆ ನಿಯಂತ್ರಿಸುವುದು ಕಷ್ಟಸಾಧ್ಯವಾಗಿ ಪರಿಣಮಿಸಿತ್ತು.

ಸಂಜೆ 5 ಗಂಟೆಯಾದರೂ ಕಾರ್ಮಿಕರು ಸರದಿ ನಿಲ್ಲುವುದು ಕೊನೆಯಾಗಲಿಲ್ಲ. ಕಿಟ್‌ ಪಡೆದವರ ಗುರುತಿನ ಚೀಟಿಗೆ ಪಂಚ್‌ಹಾಕಿ ಕಳುಹಿಸಲಾಯಿತು. ಸಂಜೆತನಕ ಮೂರು ಲಾರಿಗಳಲ್ಲಿ ಕಿಟ್‌ ತಲುಪಿದವು. ಇನ್ನೂ ಸಾಕಷ್ಟು ಕಾರ್ಮಿಕರು ಕಿಟ್‌ ಸಿಗುತ್ತದೆಯೋ ಇಲ್ಲವೋ ಎನ್ನುವ ನಿರಾಸೆಯಿಂದ ಪೇಚಾಡಿಕೊಂಡು ನಿಂತಿದ್ದರು. ಮಧ್ಯಾಹ್ನದ ಊಟವಿಲ್ಲದೆ ಕೆಲವರು ಕಾದಿದ್ದರು.

‘ರಾಯಚೂರು ನಗರದಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರಿದ್ದೇವೆ. ಬೇರೆ ಬೇರೆ ಸ್ಥಳಗಳಲ್ಲಿ ಆಹಾರಧಾನ್ಯದ ಕಿಟ್‌ ವಿತರಿಸುವ ವ್ಯವಸ್ಥೆ ಮಾಡಬೇಕಿತ್ತು. ಒಂದೊಂದೆ ಲಾರಿಗಳು ಬರುತ್ತಿವೆ. ಸಿಗುತ್ತದೆಯೋ ಇಲ್ಲವೋ ಎಂದು ಜನರು ನುಗ್ಗುತ್ತಿದ್ದಾರೆ. ಅಧಿಕಾರಿಗಳು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. 4 ಕೆಜಿ ಅಕ್ಕಿ, ಒಂದು ಲೀಟರ್‌ ಅಡುಗೆ ಎಣ್ಣೆ, ಅರಿಷಣಪುಡಿ, ಕಾರಪುಡಿ ಪಡೆಯುವುದಕ್ಕಾಗಿ ಒಂದು ದಿನದ ಕೆಲಸ ಬಿಟ್ಟು ನಿಂತಿದ್ದೇವೆ. ಆಹಾರಧಾನ್ಯದ ಕಿಟ್‌ ಮೌಲ್ಯವು ಒಂದು ದಿನದ ದಿನಗೂಲಿಗೂ ಸಮನಾಗಿಲ್ಲ’ ಎಂದು ಕಟ್ಟಡ ಕಾರ್ಮಿಕ ಧರ್ಮರಾಜ್‌ ಅವರು ‘ಪ್ರಜಾವಾಣಿ’ ಎದುರು ಅಸಮಾಧಾನ ಹೊರಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT