ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: 136 ಬಾಲೆಯರ ವಾಸಕ್ಕೆ ಒಂದೇ ಹಾಲ್‌

ಬಾಡಿಗೆ ಪಾವತಿಸಿದರೂ ದೊರಕದ ಸೌಲಭ್ಯ! ಅಂಬೇಡ್ಕರ್ ವಸತಿ ಶಾಲೆಯ ದುಃಸ್ಥಿತಿ
Published 15 ಡಿಸೆಂಬರ್ 2023, 6:50 IST
Last Updated 15 ಡಿಸೆಂಬರ್ 2023, 6:50 IST
ಅಕ್ಷರ ಗಾತ್ರ

ತುರ್ವಿಹಾಳ: ಅಲ್ಲಿ 247 ವಿದ್ಯಾರ್ಥಿಗಳಿದ್ದಾರೆ. 136 ಬಾಲಕಿಯರಿಗೆ ನೆಲೆಸಲು ಇರೋದು ಒಂದೇ ಹಾಲ್‌. 111 ಬಾಲಕರಿಗೆ ಚಿಕ್ಕ–ಚಿಕ್ಕ ಮೂರು ಕೊಠಡಿಗಳಿವೆ. ಅಲ್ಲಿ ಜಾಗ ಸಾಕಾಗದೇ ಅಡುಗೆ ಕೊಠಡಿಯಲ್ಲಿ ಮಲಗಿ ರಾತ್ರಿ ಕಳೆಯುತ್ತಾರೆ...

ಇದು ಪಟ್ಟಣದ ಹೊರವಲಯದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ದುಃಸ್ಥಿತಿ.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುವ ಈ ಶಾಲೆಯ ಕಟ್ಟಡಕ್ಕೆ ಮಾಸಿಕ ಅಂದಾಜು ₹3ಲಕ್ಷ ಬಾಡಿಗೆ ಇದೆ. ಅಷ್ಟಾಗಿಯೂ ವಿದ್ಯಾರ್ಥಿಗಳಿಗೆ ಸಮರ್ಪಕ ಮೂಲಸೌಲಭ್ಯಗಳು ಸಿಕ್ಕಿಲ್ಲ.

2017–18ನೇ ಸಾಲಿನಲ್ಲಿ ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮಕ್ಕೆ ಈ ಶಾಲೆ ಮಂಜೂರಾಗಿದೆ. ಆದರೆ, ಸ್ಥಳ ಹಾಗೂ ಕಟ್ಟಡದ ಕೊರತೆಯಿಂದ ಮೊದಲಿಗೆ ಮಸ್ಕಿ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ಶಾಲೆ ಕಾರ್ಯಾರಂಭವಾಗಿತ್ತು. ಅಲ್ಲಿ6 ವರ್ಷಗಳ ನಡೆದ ಶಾಲೆಯು ಇದೀಗ ಮೇ1ರಿಂದ ಸಿಂಧೂರಿನ ತಾಲ್ಲೂಕಿನ ತುರ್ವಿಹಾಳ ಪಟ್ಟಣಕ್ಕೆ ಸ್ಥಳಾಂತರವಾಗಿದೆ. ಆದರೆ, ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ.

ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾಚನಾಲಯ, ಪ್ರಯೋಗಾಲಯ, ಬಾಲಕಿಯರಿಗೆ ವಾಸಿಸಲು ಸುಸಜ್ಜಿತ ಕೊಠಡಿಗಳ ಕೊರತೆ ಹಾಗೂ ಕಾಂಪೌಂಡ್‌ ಕೊರತೆ, ಕಾಯಂ ಶಿಕ್ಷಕರ ಕೊರತೆ, ಬಾಲಕಿಯರು ತಂಗುವ ಕೊಠಡಿಗೂ, ಬಾಲಕರ ತಂಗುವ ಕೊಠಡಿಗೂ ಬರೀ 100 ಮೀಟರ್‌ ಅಂತರವಿದೆ. ಇಬ್ಬರಿಗೂ ಒಬ್ಬರೇ ಕಾವಲುಗಾರರು... ಹೀಗೆ ‘ಇಲ್ಲ’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

111 ಬಾಲಕರಿಗೆ 5 ಶೌಚಾಲಯಗಳಿವೆ. ಆದರೆ, ಅವುಗಳ ಶೌಚ ಗುಂಡಿಗಳು ತುಂಬಿ ಹೋಗಿದ್ದು, ಅದರ ದುರ್ನಾತ ಸುತ್ತಲಿನ 200 ಮೀಟರ್ ಹರಡಿದೆ. ಅವುಗಳೇ ನಿತ್ಯ ಶೌಚಕ್ಕೆ ಆಧಾರ. ಬಿಸಿ ನೀರಿನ ವ್ಯವಸ್ಥೆಯಿಲ್ಲದ ಚಳಿಗಾಲದಲ್ಲಿ ನಿತ್ಯ ಸ್ನಾನ ಸವಾಲಾಗಿದೆ. ಅದಕ್ಕೂ ಮೇಲಾಗಿ ಈಗ ಬಳಸುವ ನೀರಿನಿಂದ ಸ್ನಾನ ಮಾಡಿದರೆ ಕೆಲವರಿಗೆ ಮೈಮೇಲೆ ಕಜ್ಜಿಯಾಗುತ್ತಿವೆ ಎಂಬುದು ಮಕ್ಕಳ ಅಳಲು.

ತರಗತಿಯಲ್ಲಿ ಆಸನಗಳ ವ್ಯವಸ್ಥೆಯಿಲ್ಲದೇ ನೆಲದ ಮೇಲೆ ಕುಳಿತು ಪಾಠ ಆಲಿಸಿದ 7ನೇ ತರಗತಿಯ ಮಕ್ಕಳು
ತರಗತಿಯಲ್ಲಿ ಆಸನಗಳ ವ್ಯವಸ್ಥೆಯಿಲ್ಲದೇ ನೆಲದ ಮೇಲೆ ಕುಳಿತು ಪಾಠ ಆಲಿಸಿದ 7ನೇ ತರಗತಿಯ ಮಕ್ಕಳು

‘ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಗುಂಜಳ್ಳಿ ಹೋಬಳಿಯ ಬಪ್ಪೂರು ಬಳಿ 9 ಎಕರೆ 34 ಗುಂಟೆ ಭೂಮಿ ಮಂಜೂರಾಗಿದೆ. ಇನ್ನೂ ಕಟ್ಟಡ ನಿರ್ಮಾಣವಾಗಿಲ್ಲ. ಸರ್ಕಾರ ಪ್ರತಿ ತಿಂಗಳು ದುಬಾರಿ ಬಾಡಿಗೆ ಪಾವತಿಸಿ ಹಣ ವ್ಯರ್ಥ ಮಾಡುವುದಕ್ಕಿಂತ ಬಾಡಿಗೆ ಹಣದಲ್ಲೇ ಸ್ವಂತ ಕಟ್ಟಡ ನಿರ್ಮಿಸಬಹುದಲ್ಲ’ ಎಂಬುದು ಪಾಲಕರ ಅಂಬೋಣ.

ಊಟದ ಕೊಠಡಿ ಇಲ್ಲದ ಕಾರಣ ಮಕ್ಕಳು ತಟ್ಟೆ ಹಿಡಿದು ಊಟವನ್ನು ಹಾಕಿಸಿಕೊಂಡರು
ಊಟದ ಕೊಠಡಿ ಇಲ್ಲದ ಕಾರಣ ಮಕ್ಕಳು ತಟ್ಟೆ ಹಿಡಿದು ಊಟವನ್ನು ಹಾಕಿಸಿಕೊಂಡರು

ಬೋಧಕರ ಕೊರತೆ:

‘6ರಿಂದ 10ನೇ ತರಗತಿಯವರೆಗೆ 136 ಬಾಲಕಿಯರು ಹಾಗೂ 111 ಬಾಲಕರು ಸೇರಿದಂತೆ ಒಟ್ಟು 247 ಮಕ್ಕಳು ಕಲಿಯುತ್ತಿದ್ದಾರೆ. ತರಗತಿ ಹಾಗೂ ವಿಷಯಕ್ಕೆ ಅನುಸಾರ 10 ಶಿಕ್ಷಕರ ಮಂಜೂರಾತಿ ಇದ್ದು, ಐವರು ಮಾತ್ರ ಕಾಯಂ ಶಿಕ್ಷಕರಿದ್ದಾರೆ. ಗಣಿತ, ವಿಜ್ಞಾನ, ಹಿಂದಿ, ಕನ್ನಡ, ಸಮಾಜ ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ. ಕಾಯಂ ಶಿಕ್ಷಕರು ಹೊರುವ ಫಲಿತಾಂಶದ ಜವಾಬ್ದಾರಿ ಅತಿಥಿ ಶಿಕ್ಷಕರು ಹೊರಲು ಸಾಧ್ಯವೇ’ ಎಂಬುದು ಕಾರ್ಮಿಕ ಮುಖಂಡ ಅನ್ವರ್ ಪಾಷಾ ಪ್ರಶ್ನಿಸುತ್ತಾರೆ.

....
....
ಹಾಸ್ಟೆಲ್‌ ಆರಂಭವಾಗಿ ಏಳು ತಿಂಗಳಾದರೂ ಪ್ರಾಚಾರ್ಯರು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಪ್ರಯತ್ನ ನಡೆಸಿಲ್ಲ. ಇದು ಮಕ್ಕಳ ಮೇಲಿನ ಪ್ರಾಚಾರ್ಯರ ಕಾಳಜಿಗೆ ಕೈಗನ್ನಡಿ
ಅನ್ವರ್‌ಪಾಷಾ ದಳಪತಿ ಕಾರ್ಮಿಕ ಮುಖಂಡ ತುರ್ವಿಹಾಳ
136 ಬಾಲಕಿಯರಿಗೆ ವಾಸಿಸಲು ಒಂದೇ ಕೊಠಡಿಯಿದೆ. ರಾತ್ರಿ ನಿದ್ರಿಸಲು ತುಂಬಾ ತೊಂದರೆಯಾಗುತ್ತಿದೆ. ಕೊಠಡಿಯ ಕಿಟಕಿಗಳಿಗೆ ಸೊಳ್ಳೆತಡೆ ಜಾಲರಿಯೂ ಇಲ್ಲ
ಈಳಿಗೇರ, ಪಾಲಕ, ಮೆದಿಕಿನಾಳ
2018ರಲ್ಲಿ ಬಪ್ಪೂರ ಗ್ರಾಮದ ಹತ್ತಿರ ವಸತಿ ಶಾಲೆಯ ಕಟ್ಟಡಕ್ಕಾಗಿ 9.34 ಎಕರೆ ಭೂಮಿ ಮಂಜೂರಾಗಿದೆ. ಕಟ್ಟಡ ನಿರ್ಮಾಣವಾದರೆ  ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ
ಗಂಗಪ್ಪ ಕವಿತಾಳ ಪ್ರಾಚಾರ್ಯರು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ(ಗುಂಜಳ್ಳಿ) ತುರ್ವಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT