ತುರ್ವಿಹಾಳ: ಕಾಯಕಲ್ಪ ಕಾಣದ ಗ್ರಂಥಾಲಯ

ಶುಕ್ರವಾರ, ಏಪ್ರಿಲ್ 19, 2019
30 °C
₹ 15 ಲಕ್ಷ ಅನುದಾನ ಬಿಡುಗಡೆಯಾದರೂ ಅಭಿವೃದ್ಧಿ ಕೊರತೆ

ತುರ್ವಿಹಾಳ: ಕಾಯಕಲ್ಪ ಕಾಣದ ಗ್ರಂಥಾಲಯ

Published:
Updated:
Prajavani

ತುರ್ವಿಹಾಳ (ರಾಯಚೂರು): ನಿರೀಕ್ಷೆಯಂತೆ ಎಲ್ಲವೂ ನೆರವೇರಿದ್ದರೆ ಮತ್ತು ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿದ್ದರೆ ಪಟ್ಟಣದಲ್ಲಿ ಈ ವೇಳೆಗೆ ಸಕಲ ಸೌಲಭ್ಯವುಳ್ಳ ಉತ್ತಮ ಗ್ರಂಥಾಲಯ ನಿರ್ಮಾಣವಾಗಬೇಕಿತ್ತು. ಆದರೆ, ವರ್ಷಗಳೇ ಕಳೆದರೂ ಗ್ರಂಥಾಲಯ ನಿರ್ಮಾಣಗೊಳ್ಳುವ ಲಕ್ಷಣ ಮಾತ್ರ ಗೋಚರಿಸುತ್ತಿಲ್ಲ.

ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದ ತುರ್ವಿಹಾಳಕ್ಕೆ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 6 ವರ್ಷಗಳ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ₹ 15 ಲಕ್ಷ ಅನುದಾನ ಬಿಡುಗಡೆ ಆಗಿತ್ತು. ತುರ್ವಿಹಾಳ ಪ್ರಸ್ತುತ ಪಟ್ಟಣ ಪಂಚಾಯಿತಿ ಕೇಂದ್ರವಾಗಿ ಮೇಲ್ದರ್ಜೆಗೇರಿದರೂ ಗ್ರಂಥಾಲಯ ಮಾತ್ರ ನಿರ್ಮಾಣಗೊಂಡಿಲ್ಲ.

ನಿವೇಶನ ಮತ್ತು ಕಟ್ಟಡದ ಕೊರತೆಯಿಂದ ಗ್ರಂಥಾಲಯವನ್ನು ಈಗಲೂ ಪಶುಸಂಗೋಪನೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲೇ ಪುಸ್ತಕ ಮತ್ತು ಪತ್ರಿಕೆಗಳ ರಾಶಿ ಮಧ್ಯೆಯೇ ಓದುಗರು ಪತ್ರಿಕೆಗಳನ್ನು ಓದಬೇಕು. ಪುಸ್ತಕಗಳ ಜೋಡಣೆ ಸಮರ್ಪಕವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ
ಇದೆ.

ಗ್ರಂಥಾಲಯಕ್ಕೆ ಸಮರ್ಪಕ ಸೌಲಭ್ಯ ಒದಗಿಸುವಂತೆ ಕೋರಿ ಪಟ್ಟಣದ ಪ್ರಮುಖರು ಮತ್ತು ನಿವಾಸಿಗಳು ಈ ಹಿಂದಿನ ಸಚಿವ ತನ್ವೀರ್‌ ಸೇಠ್‌ಗೆ ಮನವಿಪತ್ರ ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಲಿಲ್ಲ.

‘ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2 ಪದವಿ ಕಾಲೇಜು, 2 ಪದವಿ ಪೂರ್ವ ಕಾಲೇಜು, 4 ಪ್ರೌಢಶಾಲೆ, 10ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳಿವೆ. 13 ಸಾವಿರ ಓದುಗರು ಹಾಗೂ ವಿದ್ಯಾರ್ಥಿಗಳು ಸೇರಿ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಪಟ್ಟಣದಲ್ಲಿದೆ. ಆದರೂ ಸೂಕ್ತ ಗ್ರಂಥಾಲಯ ವ್ಯವಸ್ಥೆ ಇಲ್ಲ’ ಎಂದು ನಿವಾಸಿಗಳು ದೂರಿದರು. 

‘ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆಂದೇ ಅನುದಾನ ಬಿಡುಗಡೆಯಾಗಿದೆ ಅಲ್ಲದೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಆದರೆ ನಿವೇಶನ ಮತ್ತು ಕಟ್ಟಡ ಸಿಗದಿರುವ ನೆಪವೊಡ್ಡಿ ಗ್ರಂಥಾಲಯ ಈವರೆಗೆ ಸ್ಥಾಪನೆಯಾಗಿಲ್ಲ’ ಎಂದು ಶಂಕರಗೌಡ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಡಪದ ತಿಳಿಸಿದರು.

‘ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಪ್ರತಾಪಗೌಡರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಆದರೆ, ಅವರು ಸಹ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಆರೋಪಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರಿಗೆ ಮತ್ತು ಜ್ಞಾನ ವೃದ್ಧಿಗಾಗಿ ಓದುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ
ತುಂಬಾ ಉಪಯುಕ್ತ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಗ್ರಂಥಾಲಯಕ್ಕೆ ಸಾಧ್ಯವಾದಷ್ಟು ಬೇಗ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಬಾರದು’ ಎಂದು ನಿವಾಸಿಗಳಾದ ಶ್ರೀನಿವಾಸ, ಶಶಿಧರ ಕುರಿ, ಮಲ್ಲಯ್ಯ ಹೂವಿಬಾವಿ, ಶಶಿಧರ ಪತ್ತಾರ ಮನವಿ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !