ಭಾನುವಾರ, ಜೂನ್ 13, 2021
29 °C
ಬಡಾವಣೆಗಳಲ್ಲೂ ಗಸ್ತು ಆರಂಭಿಸಿರುವ ಪೊಲೀಸರು

ಅನಗತ್ಯ ಹೊರಬಿದ್ದರೆ ಪೊಲೀಸ್‌ ಲಾಠಿ ಏಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಾದ್ಯಂತ ಸೋಮವಾರ ಲಾಕ್‌ಡೌನ್‌ ಜಾರಿ ಬಿಗಿಗೊಳಿಸಿರುವ ಪೊಲೀಸರು ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯ ಸಂಚರಿಸುವವರ ವಾಹನಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ದಂಡ ವಿಧಿಸಿದರು.

ರಾಯಚೂರು ನಗರದಲ್ಲಿ ಪೊಲೀಸರು ಲಘು ಲಾಠಿಪ್ರಯೋಗ ಆರಂಭಿಸಿರುವುದು ಕಂಡುಬಂತು. ಸ್ಟೇಷನ್‌ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಗಂಜ್‌ ವೃತ್ತ, ತೀನ್‌ ಕಂದಿಲ್‌, ನವೋದಯ ಕ್ಯಾಂಪಸ್‌ ಎದುರು, ಶೆಟ್ಟಿಬಾವಿ ಚೌಕ್‌, ಪಟೇಲ್‌ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸರು ನಿಗಾ ವಹಿಸಿ ನಿಂತಿದ್ದರು.

ಬೆಳಿಗ್ಗೆ 10.30 ರ ಬಳಿಕ ಇದ್ದಕ್ಕಿದ್ದಂತೆ ರಸ್ತೆಗಳು ಮತ್ತು ಮಾರುಕಟ್ಟೆಗಳು ನಿರ್ಜನ ಪ್ರದೇಶಗಳಾದವು. ಆನಂತರ ವಿವಿಧ ಕೆಲಸಗಳಿಗಾಗಿ ಬರುತ್ತಿದ್ದ ಬೈಕ್‌ ಸವಾರರು ಹಾಗೂ ಇತರೆ ವಾಹನಗಳಲ್ಲಿದ್ದವರನ್ನು ಪೊಲೀಸರು ವಿಚಾರಿಸಿದರು. ಅನಗತ್ಯ ಸಂಚಾರ ಎಂದು ಗೊತ್ತಾಗುತ್ತಿದ್ದಂತೆ, ರಸ್ತೆ ಪಕ್ಕಕ್ಕೆ ಕರೆದೊಯ್ದು ದಂಡ ವಿಧಿಸುವ ಕೆಲಸ ಮಾಡಿದರು.

ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಹಾಗೂ ಪ್ರಮುಖ ಬಡಾವಣೆ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಬೇಲಿಗಳನ್ನು ಹಾಕಲಾಗಿದೆ. ಎಲ್ಲ ಕಡೆಗೂ ಹಗಲಿರುಳು ಕರ್ತವ್ಯ ನಿರ್ವಹಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆ ಆವರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ನಿಲುಗಡೆ ಮಾಡಿರುವುದನ್ನು ಕಾಣಬಹುದು.

ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 779 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, 521 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅನಗತ್ಯವಾಗಿ ಸಂಚರಿಸುವವರಿಂದ ಒಟ್ಟು ₹80 ಸಾವಿರ ದಂಡ ವಸೂಲಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಮೊದಲ ದಿನ ಎಚ್ಚರಿಕೆ ನೀಡಲಾಗಿದ್ದು, ಮನೆಗಳಿಂದ ಅನಗತ್ಯ ಹೊರಬರುವವರ ಮೇಲೆ ಮಂಗಳವಾರದಿಂದ ನಿಗಾ ವಹಿಸಲಾಗುವುದು.

ಸಕಾರಣವಿಲ್ಲದೆ ಯಾವುದೇ ವಾಹನಗಳು ಸಂಚರಿಸುವುದಕ್ಕೆ ಅವಕಾಶ ಇರುವುದಿಲ್ಲ. ತುರ್ತು ಪರಿಸ್ಥಿತಿ ಹೊರತುಪಡಿಸಿ ಜನರು ಮನೆಗಳಿಂದ ಹೊರಬರಬಾರದು. ಬಡಾವಣೆಗಳಲ್ಲಿ ಗುಂಪಾಗಿ ನಿಲ್ಲುವುದು ಕಂಡುಬಂದರೆ, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿಕೊಂಡು ಅಗತ್ಯ ಸರಕುಗಳನ್ನು ಖರೀದಿಸುವುದಕ್ಕೆ ಅವಕಾಶವಿದೆ. ಆಯಾ ಬಡಾವಣೆಗಳಲ್ಲಿಯೇ ಅಗತ್ಯ ಸರಕುಗಳನ್ನು ಖರೀದಿಸಿಕೊಳ್ಳುವುದು ಉತ್ತಮ ಎಂಬುದು ಅಧಿಕಾರಿಗಳ ವಿವರಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.