ಬುಧವಾರ, ನವೆಂಬರ್ 13, 2019
22 °C
ನಾಗಣ್ಣ ಸಾಹುಕಾರ ನೂತನ ಅಧ್ಯಕ್ಷ

ಬಿಜೆಪಿ ತೆಕ್ಕೆಗೆ ಮಾನ್ವಿ ಎಪಿಎಂಸಿ

Published:
Updated:
Prajavani

ಮಾನ್ವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಾಗಣ್ಣ ಸಾಹುಕಾರ ಬಾಗಲವಾಡ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದ ವಶದಲ್ಲಿದ್ದ ಎಪಿಎಂಸಿಯನ್ನು ರಾಜ್ಯ ಸರ್ಕಾರದಿಂದ ನಾಮ ನಿರ್ದೇಶಿತರಾದ 3 ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟು 13 ನಿರ್ದೇಶಕರನ್ನು ಹೊಂದಿರುವ ಎಪಿಎಂಸಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಾಗಣ್ಣ ಸಾಹುಕಾರ ಬಾಗಲವಾಡ ಮತ್ತು ಕಾಂಗ್ರೆಸ್‌ ಪಕ್ಷ ಬೆಂಬಲಿತ ವೀರಾರೆಡ್ಡಿ ಕವಿತಾಳ ನಾಮಪತ್ರ ಸಲ್ಲಿಸಿದ್ದರು.  ಚುನಾವಣೆಯಲ್ಲಿ  ನಾಗಣ್ಣ ಸಾಹುಕಾರ 7 ಮತ ಪಡೆದು ಪ್ರತಿಸ್ಪರ್ಧಿ ವೀರಾರೆಡ್ಡಿ ಅವರನ್ನು ಒಂದು ಮತದ ಅಂತರಿಂದ ಸೋಲಿಸಿದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್‌ ಅಮರೇಶ ಬಿರಾದಾರ ಫಲಿತಾಂಶ ಘೋಷಿಸಿದರು.

ಎಪಿಎಂಸಿಯಲ್ಲಿ ಬಿಜೆಪಿ ಕೇವಲ 4 ನಿರ್ದೇಶಕರನ್ನು ಹೊಂದಿತ್ತು. ರಾಜ್ಯ ಸರ್ಕಾರ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿತ್ತು. ನೂತನ ನಾಮ ನಿರ್ದೇಶಿತ ಸದಸ್ಯರ ಬೆಂಬಲದಿಂದ ಬಿಜೆಪಿ ಎಪಿಎಂಸಿ ಅಧ್ಯಕ್ಷ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. 7 ಜನ ಚುನಾಯಿತ ನಿರ್ದೇಶಕರನ್ನು ಹೊಂದಿದ್ದ ಕಾಂಗ್ರೆಸ್‌ ಪಕ್ಷ, ಪದಚ್ಯುತ ಅಧ್ಯಕ್ಷ ಅಯ್ಯಣ್ಣ ನಾಯಕ ಅನಾರೋಗ್ಯದಿಂದ ನಿಧನರಾದ ಕಾರಣ 6ಕ್ಕೆ ಕುಸಿದು ಅಧಿಕಾರ ಕಳೆದುಕೊಂಡಿದೆ.

ನಿರ್ದೇಶಕರಾದ ಹನುಮೇಶ ಮದ್ಲಾಪುರ, ಪಾರ್ವತಮ್ಮ ಶರಣಬಸಪ್ಪ ಉಮಳಿಹೊಸೂರು, ಕಡದಿನ್ನಿ ಬೀರಪ್ಪ, ಮೌಲಾಸಾಬ ಗಣದಿನ್ನಿ, ಸೈಯದ್‌ ಹಾಜಿ, ಭೀಮವ್ವ ಬಸಣ್ಣ, ಸುಬ್ಬಾರಾವ್‌ ಚೌದರಿ, ವಾಸನಗೌಡ , ನಾಮನಿರ್ದೇಶಿತ ಸದಸ್ಯರಾದ ಎಚ್‌.ಕೆ.ಅಮರೇಶ ಸಿರವಾರ, ಅಮರೇಗೌಡ ಹಾಲಾಪುರ ಮತ್ತು ನಂಜಮ್ಮ ಚೆನ್ನಪ್ಪಗೌಡ ಚುನಾವಣೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)