ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹಂಚಿಕೆ ಆರೋಪ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

Last Updated 8 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ತುರ್ವಿಹಾಳ (ರಾಯಚೂರು ಜಿಲ್ಲೆ): ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳ ಪಟ್ಟಣದ ವಾರ್ಡ್ ಸಂಖ್ಯೆ 1, 2 ಮತ್ತು 3 ರಲ್ಲಿ ಹಾಸನ ಮೂಲದ ಬಿಜೆಪಿ ಕಾರ್ಯಕರ್ತರು ಜಾತಿವಾರು ಸರ್ವೆ ನಡೆಸಿ ಹಣ ಹಂಚಿಕೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗುರುವಾರ ಧರಣಿ ನಡೆಸಿದರು.

‘ಹಾಸನ ಜಿಲ್ಲೆಯ ಒಬ್ಬ ಮಹಿಳೆ, ಇಬ್ಬರು ಯುವಕರು ಹಾಗೂ ಕುರುಕುಂದಾ ಗ್ರಾಮದ ವ್ಯಕ್ತಿಯು ತುರ್ವಿಹಾಳ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಓಣಿಗಳಲ್ಲಿ ಯಾವ ಜಾತಿ ಜನ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಜನರನ್ನು ಕೇಳುತ್ತಾ ಕೆಲವರಿಗೆ ಹಣ ಕೊಡುತ್ತ ಹೊರಟಿದ್ದರು’ ಎಂದು ಆರೋಪಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಹಣ ಹಂಚಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು.

ಪಿಎಸ್‌ಐ ಯರಿಯಪ್ಪ ಅಂಗಡಿ ಅವರು, ‘ಸರ್ವೆ ಎಲ್ಲರೂ ಮಾಡಬಹುದು. ಹಣ ಹಂಚಿಕೆ ಮಾಡಿದ್ದರೆ ಚುನಾವಣೆ ಆಯೋಗಕ್ಕೆ ದೂರು ಕೊಡಿ’ ಎಂದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಪಿಎಸ್‌ಐ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಧರಣಿ ಆರಂಭಿಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳಕ್ಕೆ ಧಾವಿಸಿ ಕ್ರಮಕ್ಕೆ ಒತ್ತಾಯಿಸಿದರು.

‘ಯಾವ ಜಾತಿಯ ಎಷ್ಟು ಜನರಿದ್ದಾರೆ ಎಂದು ಸಮೀಕ್ಷೆ ಮಾಡುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿಯ ಮಹಿಳಾ ಕಾರ್ಯಕರ್ತರೊಬ್ಬರು ಪಟ್ಟುಹಿಡಿದರು. ಪೊಲೀಸರು ಉಭಯ ಪಕ್ಷಗಳವರನ್ನು ಸಮಾಧಾನ ಪಡಿಸಿ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT