ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರುಪಾಪುರ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸ್ವಾಗತ
Last Updated 8 ಏಪ್ರಿಲ್ 2021, 4:18 IST
ಅಕ್ಷರ ಗಾತ್ರ

ಸಿಂಧನೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಎಷ್ಟೇ ಬೊಬ್ಬೆ ಹೊಡೆದರೂ ಅತ್ಯಧಿಕ ಮತಗಳ ಅಂತರದಿಂದ ಪ್ರತಾಪಗೌಡರು ಗೆದ್ದೇ ಗೆಲ್ಲುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿರುಪಾಪುರ ಗ್ರಾಮದಲ್ಲಿ ಬುಧವಾರ ನಡೆದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಲು ಪ್ರತಾಪಗೌಡ ಪಾಟೀಲರೇ ಕಾರಣವಾಗಿದ್ದಾರೆ. ಅದಕ್ಕಾಗಿಯೇ ಅವರು ಮೊದಲ ಹೆಜ್ಜೆ ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಪ್ರತಾಪಗೌಡರು ಹಣಕ್ಕಾಗಿ ಮಾರಾಟವಾಗಿದ್ದಾರೆಂದು ಟೀಕಿಸಿ ತೇಜೋವಧೆ ಮಾಡುತ್ತಿದ್ದಾರೆ. ಕೆ.ಆರ್.ಪೇಟೆ, ಶಿರಾ ಕ್ಷೇತ್ರದಂತೆ ಮಸ್ಕಿಯಲ್ಲೂ ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದರು.

ಕೋವಿಡ್, ಲಾಕ್‍ಡೌನ್, ಪ್ರವಾಹದಂತ ಸಂಕಷ್ಟ ಪರಿಸ್ಥಿತಿಗೆ ಎದೆಗುಂದದೆ ಸವಾಲುಗಳನ್ನು ಎದುರಿಸಿದ ಧೀಮಂತ ಮುಖ್ಯಮಂತ್ರಿ ಯಡಿಯೂರಪ್ಪ ಆಗಿದ್ದಾರೆ. ಜೊತೆಗೆ ರೈತರು, ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಎಲ್ಲ ವರ್ಗದವರ ಅಭಿವೃದ್ದಿಗೆ ಶ್ರಮಿಸುವ ಮೂಲಕ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, 108 ಅಂಬುಲೆನ್ಸ್, ತುಂಗಭದ್ರಾ ಕಾಲುವೆ ಆಧುನೀಕರಣಕ್ಕೆ ಸಾವಿರಾರು ಕೋಟಿ ಹಣ ನೀಡಿ, ಎರಡು ಬೆಳೆಗೆ ನೀರು ಒದಗಿಸಿದ್ದು ಯಡಿಯೂರಪ್ಪ ಸರ್ಕಾರವಾಗಿದೆ. ಕಾಂಗ್ರೆಸ್‍ನವರ ಸುಳ್ಳಿನ ಕಥೆ ನಂಬಬಾರದು ಎಂದರು.

ಸಚಿವ ಬೈರತಿ ಬಸವರಾಜ ಮಾತನಾಡಿ, ರಾಜ್ಯದ ಮತ್ತು ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು ಎಂದರು.

ಸುರಪುರ ಶಾಸಕ ರಾಜುಗೌಡ ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ವಿಜಯೇಂದ್ರ ಅವರ ಮೇಲೆ ಲವ್ ಆದ್ದಂತೆ ಕಾಣುತ್ತಿದೆ. ಆದ್ದರಿಂದ ಪ್ರಚಾರಕ್ಕೆ ಹೋದಲೆಲ್ಲ ವಿಜಯೇಂದ್ರ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಕನಸಿನಲ್ಲಿ ಬರಬಾರದು ಎಂದರೆ ತಾಯತವನ್ನು ಕಾಂಗ್ರೆಸ್‍ನವರು ಕಟ್ಟಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಗೌಡ ವಿರುಪಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ, ಮುಖಂಡರಾದ ಎಂ.ದೊಡ್ಡಬಸವರಾಜ, ಪ್ರಸನ್ನ ಪಾಟೀಲ್, ವಿಶ್ವನಾಥ ತೋರಣದಿನ್ನಿ, ವೀರೇಶ ಸಾಲೋಣಿ, ಶಿವುಪುತ್ರಪ್ಪ ಅರಳಹಳ್ಳಿ ಇದ್ದರು. ಮಲ್ಲಿಕಾರ್ಜುನ ಜೀನೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT