ಶುಕ್ರವಾರ, ಆಗಸ್ಟ್ 6, 2021
25 °C
ಮಸ್ಕಿ: ಬಳಗಾನೂರು– ಹಿರೇಹಳ್ಳ ಸೇತುವೆ ದುರಸ್ತಿಗೆ ಸಾರ್ವಜನಿಕರ ಮನವಿ

ಅಧಿಕಾರಿಗಳ ನಿರ್ಲಕ್ಷ್ಯ: ಹಾಳಾದ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಮಸ್ಕಿ: ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಬಳಗಾನೂರು ಗ್ರಾಮದ ಹಿರೆಹಳ್ಳದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರೂ ಅಧಿಕಾರಿಗಳು ಅದನ್ನು ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಸೇತುವೆ ಕೊಚ್ಚಿ ಹೋಗಿದ್ದರಿಂದ ತಾಲ್ಲೂಕಿನ ನಾರಾಯಣ ನಗರ ಕ್ಯಾಂಪ್, ತುಗ್ಗಲದಿನ್ನಿ, ಹಾಲಾಪೂರ, ಜಂಗಮರಹಳ್ಳಿ ಮುಂತಾದ ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದ್ದು ರೈತರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಗಿದೆ.

ಮುಂಗಾರು ಮಳೆ ಚುರುಕುಗೊಂಡಿದ್ದರಿಂದ ಈ ಭಾಗದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಹಳ್ಳದ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿ 15 ದಿನ ಕಳೆದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಹರಿಸದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೇತುವೆ ಕೊಚ್ಚಿಹೋದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಆರ್.ಬಸನಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ತಹಶೀಲ್ದಾರ್ ಕವಿತಾ ಆರ್. ಸೇರಿದಂತೆ ಅನೇಕ ಮುಖಂಡರು ಶೀಘ್ರದಲ್ಲಿ ಸೇತುವೆ ದುರಸ್ತಿಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ ಎಂದು ಜನರು ದೂರಿದ್ದಾರೆ.

ಮಸ್ಕಿ ಜಲಾಶಯ ಈಗಾಗಲೇ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ಹಿರೇಹಳ್ಳಕ್ಕೆ ನೀರು ಬಿಡುವ ಸಾಧ್ಯತೆ ಇದೆ. ನೀರು ಬಿಟ್ಟರೆ ಮತ್ತೆ ಹಳ್ಳದಲ್ಲಿ ಪ್ರವಾಹ ಹೆಚ್ಚುತ್ತದೆ. ಇದರಿಂದ ಈ ಭಾಗದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಶೀಘ್ರದಲ್ಲಿ ಸೇತುವೆ ದುರಸ್ತಿಗೊಳಿಸಿ ಮುಂದಾಗುವ ಸಂಕಷ್ಟವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.