ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಅರ್ಥ ಮಾಡಿಕೊಂಡರೆ ಅದರಷ್ಟು ಸರಳವಿಲ್ಲ! : ಪ್ರಥಮ ಸ್ಥಾನ ಪಡೆದ ಟಿ.ಸ್ನೇಹಾ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ
Last Updated 8 ಮೇ 2019, 20:00 IST
ಅಕ್ಷರ ಗಾತ್ರ

ಪ್ರತಿಭಾನ್ವಿತೆಯ ವಿವರ

ಹೆಸರು : ಟಿ.ಸ್ನೇಹಾ
ತಂದೆ : ಮಂಜುನಾಥ
ತಾಯಿ : ಜಯಲಕ್ಷ್ಮಿ
ಊರು : ಸೋಮಲಾಪುರ, ಸಿಂಧನೂರು ತಾ.
ಶಾಲೆ : ಜವಾಹರ ನವೋದಯ ವಿದ್ಯಾಲಯ ಮುದುಗಲ್

ಸಿಂಧನೂರು:ಸಾಮಾನ್ಯವಾಗಿ ಎಲ್ಲರೂ ಗಣಿತ ವಿಷಯವನ್ನು ಕಬ್ಬಿಣದ ಕಡಲೆಯೆಂದು ಭಾವಿಸುತ್ತಾರೆ. ಆದರೆ ನನಗೆ ನವೋದಯ ಪ್ರವೇಶ ತರಬೇತಿಯಲ್ಲಿ ಗಣಿತ ಮತ್ತು ಕನ್ನಡದ ಬಗ್ಗೆ ಚೆನ್ನಾಗಿ ಮೂಲ ವಿಷಯಗಳನ್ನು ಹೇಳಿಕೊಟ್ಟಿದ್ದರಿಂದ ಆ ವಿಷಯಗಳು ಅತ್ಯಂತ ಸರಳ ಎಂದು ಅನ್ನಿಸಿವೆ.

ಸಿಂಧನೂರು ತಾಲ್ಲೂಕಿನ ಸೋಮಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರೂ 6 ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಲು ತೊಂದರೆಯೇನು ಆಗಲಿಲ್ಲ. ಪ್ರತಿವರ್ಷ ಫಲಿತಾಂಶ ಬಂದಾಗ ನಾನೇ ಮೊದಲ ಸ್ಥಾನದಲ್ಲಿ ಇರುತ್ತಿದ್ದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗಿಂತಲೂ ಮುಂದೆ ಇರುವ ಕಾರಣಕ್ಕಾಗಿ 10 ನೇ ತರಗತಿಯಲ್ಲಿಯೂ ಪ್ರಥಮ ಸ್ಥಾನ ಪಡೆಯುತ್ತೇನೆ ಎನ್ನುವ ವಿಶ್ವಾಸ ಇತ್ತು. ಅದರಂತೆಯೇ ಈಗ ಫಲಿತಾಂಶ ಬಂದಿದೆ.

ಶಿಕ್ಷಕರು ಹೇಳಿ ಕೊಡುತ್ತಿದ್ದ ಪಾಠಗಳನ್ನು ಅದೇ ದಿನದಂದು ವಸತಿ ನಿಲಯಕ್ಕೆ ಬಂದು ಪಠ್ಯ ಪುಸ್ತಕಗಳನ್ನು ಓದುವ ಮೂಲಕ ವಿಷಯವನ್ನು ಸಂಪೂರ್ಣ ಮನನ ಮಾಡಿಕೊಳ್ಳುತ್ತಿದ್ದೆ. ತಿಳಿಯದ ಸಂಗತಿಗಳನ್ನು ಅಲ್ಲಿಯೇ ಇರುವ ಶಿಕ್ಷಕರೊಂದಿಗೆ ಚರ್ಚಿಸಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಹತ್ತು ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಪರೀಕ್ಷೆಯನ್ನು ಸುಲಭವಾಗಿ ಬರೆಯಬಹುದು ಎನ್ನುವ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೆ.

ನಾನು ನಿರೀಕ್ಷಿಸಿದಂತೆಯೆ ಹೆಚ್ಚಿನ ಪ್ರಶ್ನೆಗಳನ್ನೆ ಕೇಳಿದ್ದರು. ಹಾಗಾಗಿ ಉತ್ತರ ಬರೆಯಲು ಅಷ್ಟೊಂದು ಕಷ್ಟವಾಗಲಿಲ್ಲ. ಪ್ರತಿನಿತ್ಯ 12 ಗಂಟೆಯವರೆಗೆ ಓದುತ್ತಿದ್ದೆ. ಪುನಾ ಬೆಳಿಗ್ಗೆ 3 ಗಂಟೆಗೆ ಏಳುತ್ತಿದ್ದೆ. ಎಲ್ಲ ಸ್ನೇಹಿತರು ಮಲಗಿರುತ್ತಿದ್ದರು. ಆದಾಗ್ಯೂ ದೀಪ ಹಚ್ಚಿಕೊಂಡು ಓದುತ್ತಿದ್ದೆ. ಇನ್ನುಳಿದವರಿಗೆ ತೊಂದರೆಯಾದರೂ ನನಗೆ ಸಹಕಾರ ನೀಡಿದರು. ಅದರ ಫಲವಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು.

ದೃಢ ವಿಶ್ವಾಸವಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲ ಇರಬೇಕು. ಯಾವುದೇ ವಿಷಯಗಳನ್ನು ಏಕಾಗ್ರತೆಯಿಂದ ಓದಬೇಕು. ಓದಿದ ವಿಷಯ ಮನದಟ್ಟಾಗಬೇಕಾದರೆ ಬರೆಯಬೇಕು. ನೂರು ಬಾರಿ ಓದುವುದು ಒಂದು ಬಾರಿ ಬರೆಯುವುದಕ್ಕೆ ಸಮ ಎಂದು ಶಿಕ್ಷಕರು ಹೇಳುತ್ತಿದ್ದ ಮಾತನ್ನು ಸದಾ ರೂಢಿಸಿಕೊಂಡು ಬಂದದ್ದಕ್ಕೆ ಪ್ರತಿಫಲ ಸಿಕ್ಕಿದೆ. ಬಾಲ್ಯದಿಂದಲೂ ನನ್ನ ತಂದೆ ಓದಲು ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ. ಏನೇ ಕೇಳಿದರೂ ಶಿಕ್ಷಕರನ್ನಾಗಲಿ, ವಿದ್ಯಾ ಸಂಸ್ಥೆಯ ಮುಖ್ಯಸ್ಥರನ್ನಾಗಲಿ ನನ್ನ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಕೇಳಿದ ಪುಸ್ತಕಗಳನ್ನೆಲ್ಲಾ ತಂದು ಕೊಡುತ್ತಿದ್ದರು. ಹೀಗಾಗಿ ಹತ್ತನೇ ತರಗತಿಯಲ್ಲಿ 600 ಅಂಕಗಳಿಗೆ 584 ಅಂಕ ಗಳಿಸಿ ಶೇ 97.3ಫಲಿತಾಂಶ ಪಡೆದು ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಸಂತಸ ಉಂಟಾಗಿದೆ.

ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಓದುತ್ತೇನೆ. ಮುಂದೆ ಐಎಎಸ್ ಅಧಿಕಾರಿಯಾಗಿ ಈ ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ನನ್ನ ತಂದೆ ತಾಯಿಯ ಸಹಕಾರ ಇರುವುದರಿಂದ ನಿಶ್ಚಿತವಾಗಿಯು ಗುರಿಯನ್ನು ಮುಟ್ಟುತ್ತೇನೆ ಎನ್ನುವ ವಿಶ್ವಾಸ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT