ಗುರುವಾರ , ಮೇ 13, 2021
38 °C

ವಿರೋಧ ಮಾಡುವುದು ಬಿಟ್ಟರೆ ಕಾಂಗ್ರೆಸ್‍ಗೆ ಏನೂ ಗೊತ್ತಿಲ್ಲ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ರಾಜ್ಯ ಬಿಜೆಪಿ ಸರ್ಕಾರ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೇನು ಗೊತ್ತಿಲ್ಲ‘ ಎಂದು ಸಚಿವ ಆರ್.ಶಂಕರ್ ಟೀಕಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಾಪಗೌಡ ಪಾಟೀಲ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಸರ್ಕಾರದ ಮೇಲೆ ಒತ್ತಡ ಹಾಕಿ ಮಸ್ಕಿ ಕ್ಷೇತ್ರದ ಅಭಿವೃದ್ದಿಗಾಗಿ ₹ 1600 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿ ಆಗಲಿದೆ‘ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾತಿವಾರು ಸಭೆ ನಡೆಸಿಲ್ಲ. ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿಲ್ಲ. ಕ್ಷೇತ್ರದಲ್ಲಿ ಹಣ ಹಂಚಿ ಚುನಾವಣೆ ಮಾಡುತ್ತಿಲ್ಲ. ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿ ಮತ ಕೇಳುತ್ತಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಸನ ಮೂಲದ ಬಿಜೆಪಿ ಮುಖಂಡರು ಹಣ ಹಂಚಿಕೆ ಮಾಡಿರುವ ವಿಡಿಯೊ ತಾವು ನೋಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಉಪಚುನಾವಣೆ ಫಲಿತಾಂಶ ನಂತರ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. 2023ರ ವಿಧಾನಸಭೆ ಚುನಾವಣೆಯೂ ಅವರ ನಾಯಕತ್ವದಲ್ಲಿಯೇ ನಡೆಯುತ್ತದೆ. ವಿಜಯೇಂದ್ರ ಅವರಿಗೆ ಉಪಚುನಾವಣೆಯ ಉಸ್ತುವಾರಿ ವಹಿಸಲಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಬಗ್ಗೆ ಮಾತನಾಡೋಕೆ ಹೋಗಲ್ಲ’ ಎಂದು ನುಣಚಿಕೊಂಡರು.

‘ಕೆ.ವಿರೂಪಾಕ್ಷಪ್ಪ ಅವರು ಬಿಜೆಪಿಗೆ ಬಂದಿರುವುದರಿಂದ ಆನೆಬಲ ಬಂದಂತಾಗಿದೆ. ಅವರಿಗೆ ಸ್ಥಾನಮಾನ ಕಲ್ಪಿಸಲಾಗುವುದು. ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿರೂಪಾಕ್ಷಪ್ಪ ಪರವಾಗಿ ನಿಂತು ಬಿಜೆಪಿಗೆ ಟಿಕೆಟ್ ಕೊಡಿಸಲು ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು’ ಎಂದು ತಿಳಿಸಿದರು.

 ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ಅವರೇ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಅವರಿಂದ ಏನು ಪರಿಣಾಮ ಆಗಲ್ಲ. 20 ಸಾವಿರ ಮತಗಳ ಅಂತರದಿಂದ ಪ್ರತಾಪಗೌಡ ಗೆಲ್ಲುತ್ತಾರೆ’ ಎಂದು ಹೇಳಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಮಲ್ಲಣ್ಣ ಪಲ್ಲೇದ, ಶ್ಯಾಮಣ್ಣ ಬೆಂಗಳೂರು, ಟಿ.ಹನುಮಂತಪ್ಪ, ಸಿದ್ರಾಮೇಶ ಮನ್ನಾಪುರ, ಪೂಜಪ್ಪ ಪೂಜಾರಿ, ಬಿ.ಶಂಭಣ್ಣ, ವೆಂಕಟೇಶ ಬಾದರ್ಲಿ, ಎಂ.ಎಸ್.ಶ್ರೀನಿವಾಸ, ಲಿಂಗರಾಜ ಹೊಸಳ್ಳಿ, ಬೀರಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು