ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಕಾಮಗಾರಿಗೆ ಉಸ್ತವಾರಿ ಸಚಿವ ಸೂಚನೆ

ಮಾನ್ವಿ ತಾಲ್ಲೂಕು ಕರೇಗುಡ್ಡದಲ್ಲಿ ಮುಖ್ಯಮಂತ್ರಿ ವಾಸ್ತವ್ಯಕ್ಕೆ ತಯಾರಿ ನಿಧಾನ
Last Updated 18 ಜೂನ್ 2019, 14:07 IST
ಅಕ್ಷರ ಗಾತ್ರ

ರಾಯಚೂರು:‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾನ್ವಿ ತಾಲ್ಲೂಕು ಕರೇಗುಡ್ಡದಲ್ಲಿ ಜೂನ್‌ 26 ರಂದು ಗ್ರಾಮವಾಸ್ತವ್ಯ ಮಾಡುವುದು ನಿಶ್ಚಯವಾಗಿದ್ದು, ಅಧಿಕಾರಿಗಳು ಕೂಡಲೇ ಪೂರ್ವ ತಯಾರಿ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಪೂರ್ವತಯಾರಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಉಸ್ತುವಾರಿ ಕಾರ್ಯದರ್ಶಿ ಕುಮಾರ ನಾಯಕ ಜೊತೆಯಲ್ಲಿ ಒಂದು ವಾರದ ಹಿಂದೆಯೇ ಗ್ರಾಮಕ್ಕೆ ಭೇಟಿ ನೀಡಿ ಮಾಡಬೇಕಾದ ತಯಾರಿ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿತ್ತು ಎಂದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕರೇಗುಡ್ಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಸೂಚಿಸಿದಂತೆ ಕೆಲಸಗಳು ಆಗುತ್ತಿಲ್ಲ. ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಅಪೂರ್ಣಾವಸ್ಥೆಯಲ್ಲಿದ್ದ ಶಾಲಾ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಸೂಚಿಸಲಾಗಿದೆ. ಶಾಲೆಗೆ ಹೊಸದಾಗಿ ಬಣ್ಣ ಬಳಿಯಬೇಕು ಎಂದು ಸೂಚಿಸಲಾಗಿತ್ತು. ಯಾವ ಕಾರ್ಯವೂ ಆಗಿಲ್ಲ ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಗ್ರಾಮ ವಾಸ್ತವ್ಯದ ಪೂರ್ವ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಸಮಸ್ಯೆಗಳ ಪಟ್ಟಿ:ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಜಿಲ್ಲೆಯಲ್ಲಿರುವ ಸಮಸ್ಯೆಗಳು ಮತ್ತು ಬೇಡಿಕೆಗಳ ಪಟ್ಟಿಯನ್ನು ಗ್ರಾಮ ವಾಸ್ತವ್ಯಕ್ಕೆ ಬರುವ ಮುಖ್ಯಮಂತ್ರಿಗೆ ಸಲ್ಲಿಸುತ್ತೇವೆ. ಸಿಂಧನೂರಿನಲ್ಲಿ ಪಶುಸಂಗೋಪನೆಗೆ ಸಂಬಂಧಿಸಿ ಸಂಶೋಧನಾ ಕೇಂದ್ರ ಸ್ಥಾಪನೆ, ಬೈಪಾಸ್‌ ರಸ್ತೆ ನಿರ್ಮಾಣ, ರಾಯಚೂರಿಗೆ ರಿಂಗ್‌ರಸ್ತೆ, ಮಾನ್ವಿ ಮತ್ತು ಸಿರವಾರದಲ್ಲಿ ಮಿನಿ ವಿಧಾನಸೌಧಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆರವು ಕೋರಲಾಗುವುದು ಎಂದು ತಿಳಿಸಿದರು.

ವಾಸ್ತವ್ಯದ ಕುರಿತು ಮುಖ್ಯಮಂತ್ರಿಗಳ ಪ್ರವಾಸ ವೇಳಾಪಟ್ಟಿ ಎರಡು ದಿನಗಳಲ್ಲಿ ಬರಲಿದೆ. ಅಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸುವರು. ಆನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಮೀಣ ತಂಡಗಳಿಂದ ಕಲಾ ಪ್ರದರ್ಶನ, ಶಾಲಾ‌ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡಬೇಕು. ತಂಡಗಳನ್ನು ಆಯ್ಕೆ ಮಾಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿಕ್ಷಣ ಇಲಾಖೆಯವರು ವಹಿಸಿಕೊಳ್ಳಬೇಕು. ಕಲಾವಿದರು ಭಾಗಹಿಸುವುದು, ಅವರಿಗೆ ಊಟ, ಉಪಚಾರ ಎಲ್ಲವನ್ನು ಇಲಾಖೆಯವರು ನಿರ್ವಹಿಸಬೇಕು ಎಂದು ಹೇಳಿದರು.

ಗ್ರಾಮದಲ್ಲಿ 8 ರಿಂದ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ವಾಹನಗಳ‌ ನಿಲುಗಡೆ, ಜನರಿಗೆ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಅಹವಾಲು ಸಲ್ಲಿಸಲು ಎಲ್ಲರಿಗೂ ಅವಕಾಶ ನೀಡಬೇಕು. ಜಿಲ್ಲಾಧಿಕಾರಿಗಳು ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ, ಕೆಲಸ ಮಾಡಿಸಬೇಕು ಎಂದು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಶರತ್‌ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌, ಉಪವಿಭಾಗಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.

ರಾಯಚೂರು ಮಹಾನಗರ ಪಾಲಿಕೆ?

ಜನಸಂಖ್ಯೆ ಕಡಿಮೆ ಇದ್ದರೂ ಹಾಸನ ನಗರವನ್ನು ಮಹಾನಗರ ಪಾಲಿಕೆ ಎಂದು ಘೋಷಿಸುವ ತಯಾರಿ ನಡೆದಿದೆ. ರಾಯಚೂರಿನಲ್ಲೂ ಜನಸಂಖ್ಯೆ ಕಡಿಮೆ ಇರುವುದರಿಂದ ಪಾಲಿಕೆಯಾಗಲು ತಾಂತ್ರಿಕವಾಗಿ ಅಡಚಣೆ ಇದೆ. ಹಾಸನದೊಂದಿಗೆ ರಾಯಚೂರನ್ನು ಕೂಡಾ ಮಹಾನಗರ ಪಾಲಿಕೆ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳು ವಾಸ್ತವ್ಯಕ್ಕೆ ಬಂದಾಗ ಈ ಬಗ್ಗೆ ಒತ್ತಡ ಹೇರಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ ಸಭೆಯಲ್ಲಿ ಪ್ರಸ್ತಾಪಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಅವರು ವಿಷಯವನ್ನು ಬೆಂಬಲಿಸಿ ಮಾತನಾಡಿದರು. ರಾಯಚೂರು ನಗರ ಮತ್ತು ಶಕ್ತಿನಗರ ಒಳಗೊಂಡತೆ ಮಹಾನಗರ ಪಾಲಿಕೆ ಮಾಡಲು ಸಾಧ್ಯವಿದೆ. ಈ ಬಗ್ಗೆ ಬೇಡಿಕೆ ಪಟ್ಟಿ ಸಿದ್ಧಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT