ಆರ್‌ಡಿಎಸ್ ಅಣೆಕಟ್ಟೆಗೆ ಶಾಸಕ ಬಸನಗೌಡ ದದ್ದಲ ಭೇಟಿ

ಮಾನ್ವಿ: ತಾಲ್ಲೂಕಿನ ರಾಜೋಳಿಬಂಡಾ ತಿರುವು ನಾಲಾ ಯೋಜನೆಯ ಅಣೆಕಟ್ಟೆಯ ಬಲಭಾಗದಲ್ಲಿ ಆಂಧ್ರಪ್ರದೇಶ ಸರ್ಕಾರ ಅಕ್ರಮವಾಗಿ ಕೈಗೊಂಡಿರುವ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಬಸನಗೌಡ ದದ್ದಲ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ(ಆರ್‌ಡಿಎಸ್) ಅಣೆಕಟ್ಟೆಗೆ ಭೇಟಿ ನೀಡಿ ಅವರು ಅಧಿಕಾರಿಗಳು ಹಾಗೂ ರೈತರ ಜತೆಗೆ ಚರ್ಚಿಸಿದರು.
ಈ ಅಂತರರಾಜ್ಯ ನೀರಾವರಿ ಯೋಜನೆಗಾಗಿ 1976ರಲ್ಲಿ ಕೆಡಬ್ಲೂಟಿ ಅವಾರ್ಡ್-1ರ ಪ್ರಕಾರ ಒಟ್ಟು 17.10ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆಗಿನ ಆಂಧ್ರಪ್ರದೇಶಕ್ಕೆ (ಈಗಿನ ತೆಲಂಗಾಣ ಸರ್ಕಾರ) 15.90 ಟಿಎಂಸಿ ಹಾಗೂ ಕರ್ನಾಟಕಕ್ಕೆ 1.20 ಟಿಎಂಸಿ ನೀರು ಹಂಚಿಕೆ ನಿಗದಿಪಡಿಸಲಾಗಿತ್ತು.
2014ರ ಕೆಡಬ್ಲೂಟಿ ಅವಾರ್ಡ್-2ರ ಅನ್ವಯ ಆಂಧ್ರಪ್ರದೇಶ ಸರ್ಕಾರಕ್ಕೆ ಆರ್‌ಡಿಎಸ್ ಅಣೆಕಟ್ಟೆಯ ಕೆಳಭಾಗದಲ್ಲಿ 4ಟಿಎಂಸಿ ನೀರು ಬಳಕೆಗೆ ನಿಗದಿಪಡಿಸಲಾಗಿದೆ. ಆದರೆ ಈಗ ಆಂಧ್ರಪ್ರದೇಶ ಸರ್ಕಾರವು ತನ್ನ ಪಾಲಿನ 4ಟಿಎಂಸಿ ನೀರು ಬಳಕೆಗಾಗಿ ಅಣೆಕಟ್ಟೆಯ ಮೇಲ್ಭಾಗದಲ್ಲಿ ಬಲಭಾಗದಿಂದ ಅಕ್ರಮವಾಗಿ ಕಾಲುವೆ ನಿರ್ಮಾಣ ಹಾಗೂ 4 ಏತನೀರಾವರಿ ಯೋಜನೆಗಳ ನಿರ್ಮಾಣ ಕಾರ್ಯ ಕೈಗೊಂಡಿದೆ.
ಇದು ಕಾನೂನುಬಾಹಿರವಾಗಿದ್ದು ಎರಡು ರಾಜ್ಯಗಳ ರೈತರ ನಿಗದಿತ ಪ್ರಮಾಣದ ನೀರಿನ ಬೇಡಿಕೆಗೆ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ಈ ಕಾಮಗಾರಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ ಪತ್ರದಲ್ಲಿ ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.