ಸೋಮವಾರ, ಅಕ್ಟೋಬರ್ 14, 2019
22 °C
ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ

ಮತಪಟ್ಟಿ ದೋಷ ಸರಿಪಡಿಸಲು ‘ಮೊಬೈಲ್‌ ಆ್ಯಪ್‌’

Published:
Updated:
Prajavani

ರಾಯಚೂರು: ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿ, ಮತದಾರ ತಮ್ಮ ಮತಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಲು ‘ವೋಟರ್‌ ಹೆಲ್ಪ್‌ಲೈನ್‌’ ಮೊಬೈಲ್‌ ಆ್ಯಪ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಟೋಬರ್‌ 15 ರೊಳಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಬೇಕಿದೆ. ಈಗ ಹಬ್ಬದ ರಜೆಯಿದ್ದರೂ ಕರ್ತವ್ಯ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದರಿಂದ, ಡಿಡಿಪಿಐ ಮೂಲಕ ಸೂಚನೆ ರವಾನಿಸಿ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.

2020 ರ ಜನವರಿ 1 ರಂದು 18 ವರ್ಷ ಪೂರ್ಣಗೊಳ್ಳಲಿರುವ ಅರ್ಹ ಮತದಾರರು ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು, ತಿದ್ದುಪಡಿ ಹಾಗೂ ವರ್ಗಾವಣೆಯಿದ್ದರೆ ಸಂಬಂಧಿಸಿದ ಅರ್ಜಿ ನಮೂನೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ, ತಹಶೀಲ್ದಾರ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.

ಅಟಲ್‌ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಪಾಸ್‌ಪೋರ್ಟ್‌, ವಾಹನ ಚಾಲನಾ ಪರವಾನಿಗೆ, ಆಧಾರ್‌ ಸಂಖ್ಯೆ, ಪಡಿತರ ಚೀಟಿ, ಸರ್ಕಾರಿ, ಅರೆಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌, ರೈತರ ಗುರುತಿನ ಚೀಟಿ, ಚುನಾವಣೆ ಆಯೋಗವು ನಮೂದಿಸಿರುವ ಯಾವುದೇ ದಾಖಲೆಗಳನ್ನು ಒದಗಿಸಿ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಬೂತ್‌ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಕುಟುಂಬದ ಸದಸ್ಯರ ವಿವರ ಪರಿಶೀಲನೆ ಮಾಡುವರು. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 16,22,681 ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ 80 ವರ್ಷ ಮೇಲ್ಪಟ್ಟವರು 20,808 ರಷ್ಟಿದ್ದಾರೆ. 17,537 ಅಂಗವಿಕಲ ಮತದಾರರಿದ್ದಾರೆ. 285 ಸೇವಾ ಮತದಾರರು ಇದ್ದಾರೆ ಎಂದರು. 

Post Comments (+)