ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ: 5 ಬಾರಿ ಶೇ 100ರಷ್ಟು ಫಲಿತಾಂಶ

Published 13 ಮೇ 2024, 5:01 IST
Last Updated 13 ಮೇ 2024, 5:01 IST
ಅಕ್ಷರ ಗಾತ್ರ

ಜಾಲಹಳ್ಳಿ: ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ನಿರಂತವಾಗಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ.

2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ಶಾಲೆಯ ಎರಡು ವಿದ್ಯಾರ್ಥಿಗಳು ಜಿಲ್ಲೆಗೆ ಎರಡನೇ ಸ್ಥಾನ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ದೇವದುರ್ಗ ತಾಲ್ಲೂಕಿನ ಪಂದ್ಯಾನ ಗ್ರಾಮದ ನಿವಾಸಿ ರಾಮನಗೌಡ ಬಾಲಪ್ಪ ಶೇ 98.72ರಷ್ಟು ಅಂಕ ಪಡೆದಿದ್ದಾರೆ. ಮಾನ್ವಿ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದ ಇನ್ನೊಬ್ಬ ವಿದ್ಯಾರ್ಥಿ ಮಲ್ಲಿಕಾರ್ಜುನ ಗುಡದಯ್ಯ ಶೇ 98.56ರಷ್ಟು ಅಂಕ ಪಡೆದುಕೊಂಡಿದ್ದಾರೆ.

ಶಾಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 44 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದ ಇಬ್ಬರು ದ್ವಿತೀಯ ಸ್ಥಾನ ಪಡೆದುಕೊಂಡು ಶೇ100 ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಾಶುಂಪಾಲ ಸೋಮಶೇಖರ ಗೌಡ ಬಾಗೂರು ತಿಳಿಸಿದ್ದಾರೆ.

5 ವರ್ಷದಿಂದ ಶೇ 100 ಫಲಿತಾಂಶ:

‘ಶಾಲೆಯಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಶೇ100 ರಷ್ಟು ಫಲಿತಾಂಶ ಬಂದಿದೆ. ಜಿಲ್ಲಾ ಮಟ್ಟದಲ್ಲಿಯೇ ಶಾಲೆ ಉತ್ತಮ ಹೆಸರು ಇದೆ. ಶಾಲೆಯಲ್ಲಿ ಉತ್ತಮವಾಗಿ ಬೋಧನೆ ಮಾಡುವಂತಹ ಶಿಕ್ಷಕರ ತಂಡ ಇದೆ. ಶಾಲೆಯಲ್ಲಿ ಬೈಯೊ ಮೆಟ್ರಿಕ್‌ ಯಂತ್ರ ಅಳವಡಿಸಿರುವುದರಿಂದ ಯಾವುದೇ ಕಾರಣಕ್ಕೂ ಶಿಕ್ಷಕರು ಗೈರಾಗುವಂತಿಲ್ಲ. ನಿತ್ಯ ಮಕ್ಕಳು ಸಹ ಬೈಯೊ ಹಾಜರಾತಿ ಹಾಕಬೇಕು ಎಂದು ಸೋಮಶೇಖರ ಗೌಡ ಬಾಗೂರು ಹೇಳಿದರು.

ಅಲ್ಲದೇ ಶಾಲೆಯ ವಿದ್ಯಾರ್ಥಿಗಳು ಅನೇಕ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ವಿಭಾಗ ಮಟ್ಟದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬರೀ ಪಾಠ, ಪ್ರವಚನದಲ್ಲಿಯೇ ತೊಡಗಿಸದೇ ಅವರು ದೈಹಿಕವಾಗಿಯು ಸದೃಢವಾಗಿ ಬೆಳೆಯಬೇಕು ಎಂದು ನಿತ್ಯ ದೈಹಿಕ ಶಿಕ್ಷಣ ಕೂಡ ನೀಡಲಾಗುತ್ತಿದೆ. 1997ರಲ್ಲಿಯೇ ಪ್ರಾರಂಭಗೊಂಡರೂ 2003-04ರಲ್ಲಿ ಈ ಶಾಲೆಯಿಂದ ಪ್ರಥಮ ತಂಡ ಹೊರಗೆ ಹೋಗಿದೆ. ಅಲ್ಲಿಂದ ಇಲ್ಲಿವರೆ ಸುಮಾರು 22 ಬ್ಯಾಚ್‌ಗಳು ತೇರ್ಗಡೆಯಾಗಿವೆ. ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿರುವ ಅನೇಕ ಯುವಕರಲ್ಲಿ ಅನೇಕರು ಸರ್ಕಾರಿ ಸೇವೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳ ಹಿಂದೆಯೇ ಸ್ಥಳೀಯ ನಿವಾಸಿ ಹನುಮಂತಪ್ಪ ಕಂಬಾರ ಎನ್ನುವ ರೈತ ಶಾಲಾ ಕಟ್ಟಡಕ್ಕೆ ಸುಮಾರು 15 ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಅದರಲ್ಲಿ 8 ಎಕರೆಯಲ್ಲಿ ವಸತಿ ಶಾಲೆ ನಿರ್ಮಿಸಿಕೊಳ್ಳಲಾಗಿದೆ. ಉಳಿದ ಜಮೀನಿನಲ್ಲಿ‌ ಜಾಲಿ ಗಿಡಗಳು ಬೆಳೆದು ಬಿಟ್ಟಿವೆ. ಕಟ್ಟಡ ನಿರ್ಮಿಸಿದ ನಂತರ ಇಲ್ಲಿವರೆಗೆ ಸುಣ್ಣ ಬಣ್ಣ ಸಹ ಮಾಡಿಲ್ಲ. ಕಟ್ಟಡ ಶಿಥಿಲಗೊಂಡಿದೆ.

ಶಿಕ್ಷಕರು ಕುಟುಂಬ ಸಮೇತವಾಗಿ ವಾಸ ಮಾಡಲು ಅಗತ್ಯವಾದ ವಸತಿ ಸೌಲಭ್ಯ ಇಲ್ಲವಾಗಿದೆ. ಇರುವ ಕೋಣೆಗಳಲ್ಲಿ ಅಗತ್ಯ ಸೌಲಭ್ಯ ಇಲ್ಲ. ಬಾಗಿಲು, ಕಿಟಾಕಿ ಕಿತ್ತುಹೋಗಿವೆ. ಶೌಚಾಲಯದ ಗುಂಡಿಗಳು ಮುಳುಗಿವೆ. ಕೋಣೆಯಲ್ಲಿ ವಿದ್ಯುತ್ ಸಂಪರ್ಕದ ವೈರ್‌ಗಳು ಸಂಪೂರ್ಣವಾಗಿ ಹಾಳಾಗಿವೆ.

ಶಾಲೆಗೆ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಹಳ್ಳದ ನೀರು ಶಾಲೆಯ ಅವರಣದಲ್ಲಿಯೇ ಬರುವುದರಿಂದ ವಿಷಜಂತುಗಳು ಮಕ್ಕಳ ಕೋಣೆಗೆ ನುಗ್ಗಿರುವ ಉದಾರಣೆಗಳು ಇವೆ. ಮುಖ್ಯ ರಸ್ತೆಯಿಂದ ಶಾಲೆಯ ಒಳಗೆ ಬರಲು ಕಿರು ಸೇತುವೆ ಇಲ್ಲದೇ ಅಹಾರ ದಾಸ್ತಾನು ಸಾಗಣೆ ಮಾಡಲು ಕಷ್ಟ ಅನುಭವಿಸುತ್ತಿದ್ದಾರೆ. ನೂರೆಟ್ಟು ತೊಂದರೆಗಳ ಮಧ್ಯೆಯು ಕೂಡ ಈ ಶಾಲೆಯ ಫಲಿತಾಂಶ ಜಿಲ್ಲಾ ಮಟ್ಟದಲ್ಲಿಯೇ ಉತ್ತಮವಾಗಿರುವುದು ಸಂತೋಷದ ಸಂಗತಿಯಾಗಿದೆ.

ಶಾಲೆಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಸೌಲಭ್ಯ ನೀಡಬೇಕು

-ಅಮರೇಶ ಹಳೆಯ ವಿದ್ಯಾರ್ಥಿ

ಶಿಕ್ಷಕರಲ್ಲಿ ಕಲಿಸುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿ ಕಲಿಯುವ ಆಸೆ ಇತ್ತು. ಆದ್ದರಿಂದ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ

-ಸೋಮಶೇಖರ ಗೌಡ ಬಾಗೂರು ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT