ಸೋಮವಾರ, ಆಗಸ್ಟ್ 2, 2021
23 °C

ರಾಯಚೂರು | ವಾಹನ ದಾಖಲೆಗಳತ್ತ ಚಾಲಕರ ಚಿತ್ತ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮೋಟಾರು ವಾಹನ ಕಾಯ್ದೆಯ ದಂಡದ ಮೊತ್ತಗಳನ್ನು ಪರಿಷ್ಕರಣೆ ಮಾಡಿದ ಬಳಿಕ ಬೈಕ್‌, ಕಾರು, ಲಾರಿ ಸೇರಿದಂತೆ ಎಲ್ಲ ರೀತಿ ವಾಹನಗಳ ಚಾಲಕರು ಮತ್ತು ಮಾಲೀಕರು ದಾಖಲೆಗಳನ್ನು ಹೊಂದುವುದರ ಕಡೆಗೆ ಚಿತ್ತ ಹರಿಸಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗೆ ಬರಲಾರಂಭಿಸಿದ್ದಾರೆ..

ಕಚೇರಿ ತೆರೆದುಕೊಳ್ಳುವ ಮೊದಲೇ ಜನರು ಜಮಾಯಿಸುತ್ತಿದ್ದಾರೆ. ಕಲಿಕಾ ಪರವಾನಿಗೆ (ಲರ್ನಿಂಗ್‌ ಲೈಸೆನ್ಸ್‌)ಗೆ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಬರುವವರ ಸಂಖ್ಯೆಗೆ ಮಿತಿ ಇದೆ. ಆದರೆ, ಈಗಾಗಲೇ ಕಲಿಕಾ ಪರವಾನಿಗೆ ಪಡೆದಿದ್ದು 30 ದಿಗಳಾದರೂ ಚಾಲನಾ ಪರವಾನಿಗೆ (ಡ್ರೈವಿಂಗ್‌ ಲೈಸೆನ್ಸ್‌) ಪಡೆಯದೆ ವಿಳಂಬ ಮಾಡಿದವರು ಈಗ ನೆನಪು ಮಾಡಿಕೊಂಡು ಮುಗಿಬೀಳುತ್ತಿದ್ದಾರೆ.

ಕಲಿಕಾ ಪರವಾನಿಗೆ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿಸುವುದಕ್ಕೆ ರಾಯಚೂರು ಜಿಲ್ಲೆಯಲ್ಲಿ ಪ್ರತಿ ದಿನ 70 ಜನರಿಗೆ ಮಾತ್ರ ಅವಕಾಶ ಒದಗಿಸಲಾಗಿತ್ತು. ಈಗ ಗರಿಷ್ಠ ಮಿತಿ 100 ಕ್ಕೆ ಏರಿಕೆ ಆಗಿದೆ. ಆದರೂ ಅರ್ಜಿ ಸಲ್ಲಿಸಲು ಪೈಪೋಟಿ ತೀವ್ರವಾಗಿದೆ. ಬಹುತೇಕ ಅರ್ಜಿದಾರರು ಮಧ್ಯವರ್ತಿಗಳ ಮೂಲಕವೇ ಅರ್ಜಿ ಸಲ್ಲಿಸಿ, ಕಾಲಿಕಾ ಪರವಾನಿಗೆ ಮತ್ತು ಚಾಲನಾ ಪರವಾನಿಗೆ ಪಡೆದುಕೊಳ್ಳುತ್ತಿದ್ದಾರೆ.

ಸಮಯ ಉಳಿಸಿಕೊಳ್ಳಲು ಮತ್ತು ಗೊಂದಲ ಇಲ್ಲದೆ ಕೆಲಸ ಮಾಡಿಕೊಳ್ಳುವುದಕ್ಕೆ ಮಧ್ಯವರ್ತಿಗಳ ಮೊರೆ ಹೋಗುವುದು ಅನಿವಾರ್ಯ ಎನ್ನುವ ಪ್ರತಿಕ್ರಿಯೆ ಜನರದ್ದು. ಅನ್‌ಲೈನ್‌ ಅರ್ಜಿ ಸಲ್ಲಿಸಲು ಸರ್ವರ್‌ ಲಿಂಕ್‌ ಆಗಲು ಕಾಯಬೇಕಾಗುತ್ತದೆ. ಸರ್ವರ್‌ ಲಿಂಕ್‌ ಮೇಲೆ ನಿಗಾ ವಹಿಸದಿದ್ದರೆ ಅರ್ಜಿ ಸಲ್ಲಿಸುವ ಗರಿಷ್ಠ ಸಂಖ್ಯಾ ಮಿತಿ ಮುಗಿದು ಹೋಗುತ್ತದೆ.

ಚಾಲನಾ ಪರವಾನಿಗೆ ಅವಧಿ ಮುಗಿದಿದ್ದರೂ ನವೀಕರಣ ಮಾಡುವುದಕ್ಕೆ ನಿರ್ಲಕ್ಷ್ಯ ವಹಿಸಿದವರು, ವಾಹನ ಪಾಸಿಂಗ್‌ ಮಾಡಿಕೊಳ್ಳಲು ಬರದೆ ಇದ್ದವರು, ಕಲಿಕಾ ಪರವಾನಿಗೆ ಪಡೆದು ಚಾಲನಾ ಪರವಾನಿಗೆ ಪಡೆಯಲು ಮರೆತವರು ಹಾಗೂ ವಾಹನ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ವ್ಯವಹಾರ ಮಾಡಿಕೊಂಡು ಮೌನ ವಹಿಸಿದ್ದವರೆಲ್ಲ ಈಗ ಆರ್‌ಟಿಒ ಕಚೇರಿಗೆ ತಾವಾಗಿಯೇ ಬರುತ್ತಿದ್ದಾರೆ ಎನ್ನುವುದು ಆರ್‌ಟಿಒ ಕಚೇರಿಯ ಅಧಿಕಾರಿಗಳ ವಿವರಣೆ.

ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳದಿದ್ದರೆ ದುಪ್ಪಟ್ಟು ದಂಡ ಕೊಡಬೇಕಾಗುತ್ತದೆ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಪ್ರತಿಯೊಂದು ಆನ್‌ಲೈನ್‌ ಆಗಿರುವುದರಿಂದ ಜನರು ದಿನವಿಡೀ ಕಾದು ನಿಲ್ಲುವ ಅನಿವಾರ್ಯತೆ ಇದೆ.

‘ಪರವಾನಿಗೆ ಹಾಗೂ ನವೀಕರಣಕ್ಕೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೊಸದಾಗಿ ಕಾರು ಮತ್ತು ಬೈಕ್‌ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಸ್ವಲ್ಪ ಕಡಿಮೆಯಾಗಿದೆ. ಮುಖ್ಯವಾಗಿ ಈ ಭಾಗದಲ್ಲಿ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಖರೀದಿಸುತ್ತಾರೆ. ಈ ವರ್ಷದ ಬರಗಾಲ ಇನ್ನೂ ಬೀಕರ ಇರುವುದರಿಂದ ವಾಹನಗಳ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶೋ ರೂಂ ಮಾಲೀಕರು ಹೇಳುತ್ತಿದ್ದಾರೆ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು