ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸಕರಿಂದ ಕ್ಷುಲ್ಲಕ ರಾಜಕೀಯ ಸಲ್ಲ’

ತಾಯಿ-ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆ ನಾಮಫಲಕ ತೆರವಿಗೆ ಖಂಡನೆ
Last Updated 13 ಜನವರಿ 2022, 14:20 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಾನ್ವಿ: ‘ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೆ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಟೀಕಿಸಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಜ.11ರಂದು ಮಾನ್ವಿ ಪಟ್ಟಣದಲ್ಲಿ ಉದ್ಘಾಟನೆಯಾದ ₹ 11ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡದಲ್ಲಿ ಶಂಕುಸ್ಥಾಪನೆಯ ನಾಮಫಲಕವನ್ನು ಅಳವಡಿಸದಂತೆ ಮಾಡಿರುವುದು ಸರಿಯಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಆದರೆ ಆಸ್ಪತ್ರೆ ಉದ್ಘಾಟನೆಯ ಮುನ್ನಾದಿನ ಶಂಕುಸ್ಥಾಪನೆಯ ನಾಮಫಲಕವನ್ನು ತೆರವುಗೊಳಿಸಿರುವುದು ಖಂಡನೀಯ’ ಎಂದರು.

‘ಆಸ್ಪತ್ರೆ ಮಂಜೂರಾದ ನಂತರ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು. ಸರ್ಕಾರದಿಂದ ಮಂಜೂರಾದ ಅನುದಾನ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಂತ ಹಂತವಾಗಿ ಬಿಡುಗಡೆಯಾಗುವುದು ಸಾಮಾನ್ಯ. ಆದರೆ ಶಾಸಕ ತಾವೊಬ್ಬರೇ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ತಂದಿದ್ದಾಗಿ ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ’ ಎಂದು ಅವರು ಟೀಕಿಸಿದರು.

‘ಶಾಸಕರಿಗೆ ನಿಜವಾದ ಕಾಳಜಿ ಇದ್ದರೆ ತಾಯಿ-ಮಕ್ಕಳ ಆಸ್ಪತ್ರೆಗೆ ತಜ್ಞ ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳ ವ್ಯವಸ್ಥೆ ಕಲ್ಪಿಸಬೇಕಿತ್ತು. ಈಗ ತಜ್ಞ ವೈದ್ಯರು, ಸಲಕರಣೆಗಳು ಇಲ್ಲದೆ ಜನರಿಗೆ ಸರಿಯಾದ ಆರೋಗ್ಯ ಸೇವೆ ದೊರಕದಂತಾಗಿದೆ. ಆಸ್ಪತ್ರೆಯನ್ನು ಉದ್ಘಾಟಿಸಿದ್ದು ಸ್ವಾಗತಾರ್ಹ. ಆದರೆ ಸಮರ್ಪಕ ಸೌಲಭ್ಯಗಳನ್ನು ಒದಗಿಸದೆ ತರಾತುರಿಯಾಗಿ ಆಸ್ಪತ್ರೆಯನ್ನು ಉದ್ಘಾಟಿಸುವ ಔಚಿತ್ಯವೇನಿತ್ತು?’ ಎಂದು ಪ್ರಶ್ನಿಸಿದರು.

‘ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಸರ್ಕಿಟ್ ಹೌಸ್ ನಿರ್ಮಾಣ, ರೀಡಿಂಗ್ ರೂಮ್, ಸಾರಿಗೆ ಡಿಪೊ, ಕ್ರೀಡಾಂಗಣ, ವಸತಿ ನಿಲಯಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಘಾಟಿಸಲು ಶಾಸಕರಿಂದ ಇದುವರೆಗೂ ಸಾಧ್ಯವಾಗಿಲ್ಲ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತ್ತಿಸಲಾಗಿತ್ತು. ನಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತಿದೆ. ಆದರೆ ಶಾಸಕರು ನಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ಲಘುವಾಗಿ ಮಾತನಾಡುವುದು ಅವರ ಯೋಗ್ಯತೆಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ರಾಜಾ ವಸಂತನಾಯಕ, ಬಿ.ಕೆ.ಅಮರೇಶಪ್ಪ, ಎ.ಬಾಲಸ್ವಾಮಿ ಕೊಡ್ಲಿ, ವೀರಭದ್ರಗೌಡ ಭೋಗಾವತಿ, ರೌಡೂರು ಮಹಾಂತೇಶಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT