ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಐತಿಹಾಸಿಕ ಬಿಲ್ಲಮರಾಜ ಬೆಟ್ಟಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಭೇಟಿ

Published 9 ಮಾರ್ಚ್ 2024, 13:38 IST
Last Updated 9 ಮಾರ್ಚ್ 2024, 13:38 IST
ಅಕ್ಷರ ಗಾತ್ರ

ಲಿಂಗಸುಗೂರು: ಪ್ರಾಚೀನ ಐತಿಹ್ಯದ ಕುರುಹುಗಳ ಜೊತೆಗೆ ಬಲ್ಲಮ ಮಹಾರಾಜರ ಆಳ್ವಿಕೆಯ ರಾಜಧಾನಿ ಕರಡಕಲ್ಲಿನ ಬಿಲ್ಲಮ ಬೆಟ್ಟಕ್ಕೆ ಶುಕ್ರವಾರ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾರಾಯಣಪುರ (ಬಸವಸಾಗರ) ಅಣೆಕಟ್ಟೆ ಹಿನ್ನೀರು ಬಳಸಿಕೊಂಡು ರಾಯಚೂರು ಜಿಲ್ಲೆ ಲಿಂಗಸುಗೂರು, ಮಾನ್ವಿ, ಸಿಂಧನೂರು ತಾಲ್ಲೂಕುಗಳಿಗೆ ನೀರು ಪೂರೈಸುವ ಜಲಧಾರೆ ಯೋಜನೆ ಕಾಮಗಾರಿ ಆರಂಭಗೊಂಡಿದೆ. ಈ ಪೈಕಿ ಬಿಲ್ಲಮರಾಜ ಬೆಟ್ಟದಲ್ಲಿ ಮಾಸ್ಟರ್ ಬ್ಯಾಲೆನ್ಸಿಂಗ್‍ ರಿಸರ್ವಾಯರ್ (ಎಂಬಿಆರ್) ಟ್ಯಾಂಕ್‍ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವಿರೋಧಿಸಿದ್ದರಿಂದ ಸಂಸದರ ಭೇಟಿ ಮಹತ್ವ ಪಡೆದುಕೊಂಡಿದೆ.

ಇತಿಹಾಸ ಕಾಲದಲ್ಲಿ ಜನವಸತಿ ಪ್ರದೇಶವಾಗಿತ್ತು ಎಂಬುದಕ್ಕೆ ಅನೇಕ ಅಸ್ಥಿಪಂಜರಗಳು, ಕಲ್ಲು ಬಂಡೆಗಳ ಮೇಲೆ ಚಿತ್ರದ ಚಿನ್ಹೆಗಳ ಗುರುತು ಸೇರಿದಂತೆ ಇತರೆ ಕುರುಹುಗಳು ಪತ್ತೆಯಾಗಿವೆ. ಅಲ್ಲದೆ, ರಾಜ ಮಹಾರಾಜರ ಕಾಲದಲ್ಲಿ ರಾಜಧಾನಿಯಾಗಿದ್ದ ಬೆಟ್ಟದ ಸಂರಕ್ಷಣೆಗೆ ಮುಂದಾಗುವಂತೆ ಸಂಶೋಧಕರು, ಇತಿಹಾಸಕಾರರು ಮೇಲಿಂದ ಮೇಲೆ ಒತ್ತಡ ಹಾಕುತ್ತಿರುವುದು ಎಂಬಿಆರ್ ಟ್ಯಾಂಕ್‍ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ.

‘ಬಿಲ್ಲಮಬೆಟ್ಟದ ಮೇಲ್ತುಧಿಯಲ್ಲಿ ಕಲ್ಲುಬಂಡೆ ನೆಲಸಮಗೊಳಿಸಿ ಬೃಹತ್‍ ಗಾತ್ರದ ಟ್ಯಾಂಕ್‍ ನಿರ್ಮಾಣದಿಂದ ರಾಜರ ಕಾಲದ ಹಾಗೂ ಪ್ರಾಚೀನ ಕುರುಹುಗಳು ನಾಶಪಡಿಸಿದಂತಾಗುತ್ತದೆ. ಈ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕು. ಜಿಲ್ಲಾಧಿಕಾರಿ ಜೊತೆ ಮಾತನಾಡಿ ನಿರ್ಧಾರಕ್ಕೆ ಬರೋಣ. ಸಂಶೋಧಕರು, ಇತಿಹಾಸಕಾರರ ಭಾವನೆಗಳಿಗೆ ಸ್ಪಂದಿಸೋಣ’ ಎಂದು ಸಂಸದರು ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ ಗುಪ್ತಾ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಂಗಪ್ಪ ರಾಮದುರ್ಗ, ಕಿರಿಯ ಎಂಜಿನಿಯರ್ ಭೋಜನಗೌಡ, ಕಂದಾಯ ನಿರೀಕ್ಷಕ ರಾಮಕೃಷ್ಣ ಇದ್ದರು.

ಲೋಕಸಭೆ ಸ್ಪರ್ಧೆ ಖಚಿತ

ಲಿಂಗಸುಗೂರು: ‘ನಾನು ರಾಯಚೂರು, ಯಾದಗಿರಿ ಲೋಕಸಭಾ ಕ್ಷೇತ್ರದಿಂದ ಚುನಾಯಿತಗೊಂಡು ನಿರೀಕ್ಷೆಗೆ ಮೀರಿದ ಕೆಲಸ ಕಾರ್ಯ ಮಾಡಿರುವ ತೃಪ್ತಿ ಹೊಂದಿರುವೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ವರಿಷ್ಠರು ಚುನಾವಣೆ ದೃಷ್ಟಿಯಿಂದ ಕ್ಷೇತ್ರದಲ್ಲಿ ಉಳಿದು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ. ರಾಜಕೀಯದಲ್ಲಿ ಆಕಾಂಕ್ಷಿಗಳು ಸ್ಪರ್ಧೆಗೆ ಮುಂದೆ ಬರುವುದು ಸಹಜ. ನಾನು ಆ ಕುರಿತು ಚಿಂತಿಸುವುದಿಲ್ಲ. ಹೈಕಮಾಂಡ್‍ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT