ಮೂಲ ಸೌಕರ್ಯ ಕೊರತೆ; ರೋಗಿಗಳ ಪರದಾಟ

6
ನೂತನವಾಗಿ ರಚನೆಯಾದ ಮಸ್ಕಿ ತಾಲ್ಲೂಕಿನಲ್ಲಿ ಮೇಲ್ದರ್ಜೆಗೆ ಏರದ ಆರೋಗ್ಯ ಸೇವೆ

ಮೂಲ ಸೌಕರ್ಯ ಕೊರತೆ; ರೋಗಿಗಳ ಪರದಾಟ

Published:
Updated:
ಮಸ್ಕಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದು ನೋಟ

ಮಸ್ಕಿ: ನೂತನವಾಗಿ ರಚನೆಯಾದ ಮಸ್ಕಿ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಇನ್ನುಳಿದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ತಾಂಡವವಾಡುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 21 ಉಪ ಆರೋಗ್ಯ ಕೇಂದ್ರಗಳು ಇವೆ. ಸೂಕ್ತ ಚಿಕಿತ್ಸೆಯ ವ್ಯವಸ್ಥೆಗಳಿಲ್ಲ. ಆರು ತಿಂಗಳ ಹಿಂದೆಯಷ್ಟೇ ರಚನೆಯಾದ ಹೊಸ ತಾಲ್ಲೂಕು ಕೇಂದ್ರದಲ್ಲಿ ವಿವಿಧ ಗ್ರಾಮಗಳಿಂದ ಬರುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೇವೆಯು ಲಭ್ಯವಾಗುತ್ತಿಲ್ಲ.

2011 ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 21 ಸಾವಿರ. ತಾಲ್ಲೂಕಿನ ಜನ ಸಂಖ್ಯೆ 2. 10 ಲಕ್ಷ ಇದೆ. ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಕೆಲಸ ಮಾತ್ರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗುತ್ತಿದೆ. ಸೂಕ್ತ ಚಿಕಿತ್ಸೆಗಾಗಿ ಬೇರೆ ತಾಲ್ಲೂಕುಗಳು ಅಥವಾ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಧಾವಿಸುವ ಪರಿಸ್ಥಿತಿ ಇದೆ.

ಮೆದಿಕಿನಾಳ ಸಂತೆಕೆಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ. ತಾಲ್ಲೂಕು ಕೇಂದ್ರ ಸ್ಥಾನವಾದ ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯ ಅಧಿಕಾರಿಗಳು ಇರಬೇಕಾಗಿತ್ತು, ಆದರೆ, ಇಲ್ಲಿ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಸಿನಿಯರ್ ಇನ್‌ಸ್ಪೆಪೆಕ್ಟರ್, 2 ಹಿರಿಯ ಸಹಾಯಕ ಹಾಗೂ 1 ಕಿರಿಯ ಸಹಾಯಕ ಹುದ್ದೆ ಹಾಗೂ ಮಹಿಳಾ ವೈದ್ಯರ ಹುದ್ದೆ ಖಾಲಿ ಇದೆ.

ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಆರು ಹಾಸಿಗೆಗಳ ಆಸ್ಪತ್ರೆಯಾಗಿ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸುಸಜ್ಜಿತ ಕಟ್ಟಡದಲ್ಲಿ ವೈದ್ಯರ ಕೊಠಡಿ, ರಕ್ಷ ಪರೀಕ್ಷಾ ಕೇಂದ್ರ, ಹೆರಿಗೆ ಕೊಠಡಿಗಳು ಇವೆ. ಆದರೆ ಎಕ್ಸರೇ, ಸ್ಕ್ಯಾನಿಂಗ್ ಸೇರಿದಂತೆ ಇತರೆ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಬೇಕಾಗಿದೆ.

ದಾಖಲೆಗಳ ಪ್ರಕಾರ, ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 100 ರಿಂದ 150 ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ತಾಲ್ಲೂಕು ಕೇಂದ್ರದ ಸುತ್ತಮುತ್ತ ಕನಿಷ್ಠ ವಾರದಲ್ಲಿ ನಾಲ್ಕು ರಸ್ತೆ ಅಪಘಾತ ಘಟನೆಗಳು ನಡೆಯುತ್ತಿವೆ. ಮಸ್ಕಿ ಆಸ್ಪತ್ರೆಗೆ ಧಾವಿಸಿದರೂ ಚಿಕಿತ್ಸೆ ಇಲ್ಲದೆ ಬೇರೆ ಕಡೆಗೆ ಹೋಗಬೇಕಾಗುತ್ತದೆ. ಈ ಹಂತದಲ್ಲಿ ಗಾಯಗೊಂಡವರ ಜೀವ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸುತ್ತದೆ. ಈ ಆಸ್ಪತ್ರೆಯಲ್ಲಿ ಸರಿಯಾದ ಸೌಕರ್ಯ ಇಲ್ಲದ ಕಾರಣ ಬೇರೆ ಕಡೆಗೆ ಸ್ಥಳಾಂತರ ಅನಿವಾರ್ಯ ಆಗಿದೆ.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದರೂ ಇದುವರೆಗೂ ಅದು ಕಾರ್ಯಗತಗೊಂಡಿಲ್ಲ. ₨ 1 ಕೋಟಿ ಅಂದಾಜಿನಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ನಡೆಯುತ್ತಿದೆ. 30 ಹಾಸಿಗೆಗಳ ಆಸ್ಪತ್ರೆಗೆ ಅನುಮತಿ ನೀಡುವಂತೆ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇನ್ನೂ ಅನುಮತಿ ದೊರೆತಿಲ್ಲ. ಸರ್ಕಾರ ಕೂಡಲೇ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಅನುಮತಿ ನೀಡುವ ಮೂಲಕ ತಾಲ್ಲೂಕು ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯ ಇದೆ.

ಅಂಕಿ ಅಂಶ
6 ಒಟ್ಟು ಆರೋಗ್ಯ ಕೇಂದ್ರಗಳು
21 ಉಪ ಆರೋಗ್ಯ ಕೇಂದ್ರಗಳು
150 ಸರಾಸರಿ ರೋಗಿಗಳ ಭೇಟಿ
2.10 ಲಕ್ಷ ತಾಲ್ಲೂಕು ಜನಸಂಖ್ಯೆ
10 ಉಪ ಕೇಂದ್ರಗಳಲ್ಲಿ ಚಿಕಿತ್ಸೆ ಇಲ್ಲ
-
ಏನಿದೆ ?
ರಕ್ತ ಪರೀಕ್ಷಾ ಕೇಂದ್ರ
ಹೆರಿಗೆ ಸೌಲಭ್ಯ
ಹೊರ ರೋಗಿಗಳ ವ್ಯವಸ್ಥೆ
ಒಳ ರೋಗಿಗಳ ವ್ಯವಸ್ಥೆ
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ
-
ಏನಿಲ್ಲಾ ?
ಏಕ್ಷರೇ ಸೌಲಭ್ಯ
ಸ್ಕ್ಯಾನಿಂಗ್
ಮಕ್ಕಳ ತಜ್ಞರು
ಮಹಿಳಾ ವೈದ್ಯರು (ಹೆರಿಗೆ)
ತಜ್ಞ ವೈದ್ಯರು

ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಕಳಿಸಲಾಗಿದೆ. ಹುದ್ದೆಗಳು ಕೂಡಾ ಶೀಘ್ರ ಭರ್ತಿಯಾಗಲಿವೆ
- ಡಾ. ರುದ್ರಗೌಡ ಪಾಟೀಲ, ತಾಲ್ಲೂಕು ವೈದ್ಯಾಧಿಕಾರಿ (ಪ್ರಭಾರ) ಮಸ್ಕಿ

ಪ್ರತಿನಿತ್ಯ ನೂರಕ್ಕೂ ಹೆಚ್ಚು ಹೊರ ಹಾಗೂ ಒಳ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
- ಡಾ. ನಾಗರಾಜ ಚೌಡಶೆಟ್ಟಿ, ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆ ಇದೆ. ಜನ ಸಾಮಾನ್ಯರಿಗೆ ಸೂಕ್ತ ಆರೋಗ್ಯ ಚಿಕಿತ್ಸೆ ದೊರೆಯುವಂತೆ ಮಾಡಲು ಆರೋಗ್ಯ ಇಲಾಖೆ ಮುಂದಾಗಬೇಕು.
- ಯಮನೂರು ಒಡೆಯರ್, ಹೋರಾಟಗಾರ

ತಾಲ್ಲೂಕು ಕೇಂದ್ರವಾಗಿರುವ ಇಲ್ಲಿಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ವಿಭಾಗ ಇಲ್ಲದ ಕಾರಣ ಬೇರೆ ತಾಲ್ಲೂಕಿಗೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ. ಈ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ ಆರಂಭಿಸಬೇಕು.
ಶಾಂತಮ್ಮ ಹರಿಜನ, ಪೌರ ಕಾರ್ಮಿಕರು

ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆದಷ್ಟು ಬೇಗ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕು
–  ವೀರೇಶ ಗೋನಾಳ ಸ್ಥಳೀಯ ಯುವಕ

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆಗೆ ಅಪಘಾತದಲ್ಲಿ ಗಾಯಗೊಂಡು ಬರುವವರ ಸಂಖ್ಯೆ ಬಹಳ ಹೆಚ್ಚು. ತುರ್ತು ನಿಗಾ ಘಟಕ, ರಕ್ತ ಬಂಡಾರ ಕೇಂದ್ರ ಮೊದಲ ಆಗಬೇಕಾಗಿದೆ
ಈರಮ್ಮ ಮಸ್ಕಿ, ಕಾಲೇಜು ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !