ಕೆರೆಗಳಿಗೆ ಹರಿಯದ ನೀರು

7
ನೀರಿಗಾಗಿ ಪರದಾಟ: ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ 14 ಕೆರೆಗಳು

ಕೆರೆಗಳಿಗೆ ಹರಿಯದ ನೀರು

Published:
Updated:
Deccan Herald

ಮುದಗಲ್: ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುದಗಲ್ ವಲಯದ ಸಣ್ಣ ನೀರಾವರಿ ಯೋಜನೆಯ ವ್ಯಾಪ್ತಿಯ ಕೆರೆಗಳಿಗೆ ಇಲ್ಲಿಯವರೆಗೂ ನೀರು ಹರಿದಿಲ್ಲ.

ಲಿಂಗಸುಗೂರು ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ 14 ಕೆರೆಗಳು ಒಳಪಟ್ಟರೆ, ಉಳಿದ 4 ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿವೆ. ಈ ಎಲ್ಲಾ ಕೆರೆಗಳು 3793.19 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತಿವೆ ಎಂದು ಸರ್ಕಾರಿ ಕಡತದಲ್ಲಿ ಇದೆ. ಆದರೆ, ಯಾವ ಕೆರೆಗಳಿಂದ ನೀರಾವರಿಯಾಗಿಲ್ಲ. ಸರ್ಕಾರ 2010–11 ರಲ್ಲಿ ಜಲ ಸಂಪನ್ಮೂಲ ಇಲಾಖೆಯ ಜಲಸಂವರ್ಧನೆ ಯೋಜನೆಯಿಂದ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ.

ಮುದಗಲ್ ವಲಯದ ಉಪ್ಪಾರ ನಂದಿಹಾಳ, ಉಳಿಮೇಶ್ವರ, ಬೋಮ್ಮನಾಳ, ಮಟ್ಟೂರು, ಭೋಗಾಪುರ, ಬುದ್ದಿನ್ನಿ, ಕನ್ನಾಪುರ ಹಟ್ಟಿ ಗ್ರಾಮದ ಕೆರೆಗಳು ದುಃಸ್ಥಿತಿಯಲ್ಲಿವೆ.

ಕೆರೆಗಳ ಎಡ, ಮತ್ತು ಬಲ ಭಾಗಗಳಲ್ಲಿ ನಿರ್ಮಿಸಿದ ಮಣ್ಣಿನ ಬಂಡುಗಳ ಮೇಲೆ ಮುಳ್ಳಿನ ಗಿಡಗಳು ಬೆಳೆದಿವೆ; ಕೆರೆಯೊಳಗೆ ಹುಲ್ಲು ಬೆಳೆದಿದೆ. ಕೆಲ ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಒಡ್ಡಿನ ಮೇಲೆ ಮುಳ್ಳು ಬೆಳೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ರೈತರ ಜಮೀನುಗಳಿಗೆ ನೀರುಣಿಸಲು ಕೆರೆಗಳ ಎಡ ಮತ್ತು ಬಲ ಸೇರಿ 65.42 ಕಿ.ಮೀ ಉದ್ದದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಗಳಲ್ಲಿ ಹುಲ್ಲು ಕಡ್ಡಿ ಹಾಗೂ ಗಿಡ ಬೆಳೆದು ಮುಚ್ಚಿಕೊಂಡಿವೆ. ಕೆರೆಗಳಲ್ಲಿದ್ದ ಹೂಳು ತೆರವು ಗೊಳಿಸದೆ ಇರುವುದರಿಂದ ಹೂಳು ತುಂಬಿ ಬೇಸಿಗೆ ವೇಳೆಯಲ್ಲಿ ಕೆರೆ ನೀರು ಬತ್ತಿ ಹೋಗುತ್ತಿವೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ. ಜಾನುವಾರುಗಳು ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.

ಕೆರೆ ಕಾಲುವೆಗಳ ಅಭಿವೃದ್ಧಿಗಾಗಿ 2008–09 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗಾಗಿ ₹ 1 ಕೋಟಿ ಅನುದಾನ ಮಂಜೂರಾಗಿದೆ. 2010-11 ನೇ ಸಾಲಿನಲ್ಲಿ ಉಪ್ಪಾರ ನಂದಿಹಾಳ, ಉಳಿಮೇಶ್ವರ, ಬೋಮ್ಮನಾಳ, ಮಟ್ಟೂರು, ಭೋಗಾಪುರ, ಕನ್ನಾಪುರ ಹಟ್ಟಿ ಕೆರೆಗಳ ಅಭಿವೃದ್ಧಿಗೆ ಜಲ ಸಂಪನ್ಮೂಲ ಇಲಾಖೆಯ ಜಲ ಸಂವರ್ಧನೆ ಯೋಜನೆಗೆ ₹ 2,50,22,276 ಅನುದಾನ ಮಂಜೂರಾದರೂ, ಇಲ್ಲಿಯವರಿಗೂ ಸಂಪೂರ್ಣ ಅಭಿವೃದ್ಧಿ ಕಂಡಿಲ್ಲ. ಈ ಮೂಲಕ ಕೆರೆಗಳಿಗೆ ನೀರು ಬಾರದೆ ಈ ಭಾಗದ ರೈತರು ಉಳಿಮೆ ಮಾಡಲು ಆಗಿಲ್ಲ.

ಕೆರೆಗಳಲ್ಲಿ ಮೀನು ಸಾಕಾಣಿಣೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿವೆ. ಮೀನು ಸಾಕಣೆಗೆ ಮೀನುಗಾರಿಕೆ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಅನುದಾನ ಮಂಜೂರಾದರೂ ಉಪಯೋಗವಾಗಿಲ್ಲ. ಕೆರೆಯಲ್ಲಿ ಮೀನುಗಳು ಇಲ್ಲದರಿಂದ ಮೀನುಗಾರರು ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ.

ರೈತರ ಸಹಾಯಕ್ಕಾಗಿ ಸರ್ಕಾರ ಸಣ್ಣ ನೀರಾವರಿ ಯೋಜನೆ ಜಾರಿಗೆ ತಂದಿದೆ. ಆದರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ವಿಫಲಗೊಂಡಿದ್ದು, ಈ ಕೆರೆಗಳು ಆಶ್ರಯಿಸಿದ ರೈತರು ಜೀವನ ನಿರ್ವಹಣೆಗೆ ಗುಳೆ ಹೋಗುವಂತಾಗಿದೆ.

ಇನ್ನು ಮುಂದಾದರೂ, ಕೆರೆ ಮತ್ತು ಕಾಲುವೆಗಳ ಅಭಿವೃದ್ಧಿ ಮಾಡಿ, ರೈತರ ಹೊಲಗಳಿಗೆ ನೀರುಣಿಸಲು ಅನುವು ಮಾಡಿಕೊಡಬೇಕೆಂದು ಈ ಪ್ರದೇಶದ ರೈತರು ಸಂಬಂಧಪಟ್ಟ ಅಧಿಕಾರಿಗಳನ್ನು ಜನರು ಒತ್ತಾಯಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !