ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತ ಮಸ್ಕಿ ಎಪಿಎಂಸಿ: ಮೇಲ್ದರ್ಜೆಗೇರಿಸಲು ರೈತರ ಒತ್ತಾಯ

Last Updated 14 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಮಸ್ಕಿ: ಲಿಂಗಸುಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧೀನದ ಮಸ್ಕಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಮೂಲಸೌಕರ್ಯಗಳಿಂದ ವಂಚಿತಗೊಂಡಿದೆ.

ಮಾರುಕಟ್ಟೆ ಆವರಣದಲ್ಲಿ ವರ್ತಕರಿಗಾಗಿ ಮಳಿಗೆಗಳನ್ನು ಕಟ್ಟಿಸಿ ಆರೇಳು ವರ್ಷಗಳು ಕಳೆದಿವೆ. ಕೆಲವು ವರ್ತಕರು ಮಾತ್ರ ದಲಾಲಿ ಅಂಗಡಿಗಳನ್ನು ಆರಂಭಿಸಿದ್ದು ಬಿಟ್ಟರೆ ಬಹುತೇಕ ವರ್ತಕರು ಇನ್ನೂ ವಹಿವಾಟು ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಮಾರುಕಟ್ಟೆ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಸೌಕರ್ಯಗಳು ಇಲ್ಲದಿರುವುದು.

ಪ್ರತಿ ವರ್ಷ ಮಸ್ಕಿ ಉಪ ಮಾರುಕಟ್ಟೆಯಿಂದ ಲಿಂಗಸುಗೂರು ಮುಖ್ಯ ಮಾರುಕಟ್ಟೆಗೆ ಲಕ್ಷಾಂತರ ರೂಪಾಯಿ ಆದಾಯ ಹೋಗುತ್ತದೆ. ಉಪ ಮಾರುಕಟ್ಟೆಯಲ್ಲಿ ಈಚೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಮತ್ತಾವ ಅಭಿವೃದ್ಧಿ ಕೆಲಸಗಳು ಆಗಿಲ್ಲ.

ಮಸ್ಕಿ ನೂತನ ತಾಲ್ಲೂಕು ಕೇಂದ್ರವಾಗಿದ್ದರೂ ಸಹ ಈ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸಿ ಮುಖ್ಯ ಮಾರುಕಟ್ಟೆಯನ್ನಾಗಿ ಘೋಷಣೆ ಮಾಡಬೇಕಾಗಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ತಾಲ್ಲೂಕು ಕೃಷಿ ಮಾರುಕಟ್ಟೆ ಇನ್ನೂ ಉಪ ಮಾರುಕಟ್ಟೆಯಾಗಿಯೇ ಉಳಿದಿದೆ.

ಮಾರುಕಟ್ಟೆಗೆ ಬರುವ ರೈತರಿಗೆ ಮೂಲಸೌಕರ್ಯಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಬೇಕಾಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಈ ಕಡೆ ಗಮನ ಹರಿಸದೆ ಇರುವುದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ.

ರೈತರು ವಿಶ್ರಾಂತಿ ಪಡೆಯುವ ಸಲುವಾಗಿ ಪ್ರತಿ ಕೃಷಿ ಮಾರುಕಟ್ಟೆಯಲ್ಲಿ ರೈತ ಭವನ ನಿರ್ಮಿಸಲು ಸರ್ಕಾರ ಅನುದಾನ ನೀಡುತ್ತಿದೆ. ಆದರೆ, ಮಸ್ಕಿ ಮಾರುಕಟ್ಟೆಯಲ್ಲಿ ಮಾತ್ರ ಇದುವರೆಗೂ ಅದು ನಿರ್ಮಾಣಗೊಂಡಿಲ್ಲ.

ಮಸ್ಕಿ ಉಪ ಮಾರುಕಟ್ಟೆಯನ್ನು ಲಿಂಗಸುಗೂರು ತಾಲ್ಲೂಕಿನಿಂದ ಬೇರ್ಪಡಿಸಿ ನೂತನ ತಾಲ್ಲೂಕು ಕೇಂದ್ರವಾದ ಮಸ್ಕಿಯಲ್ಲಿ ಮುಖ್ಯ ಮಾರುಕಟ್ಟೆಯನ್ನಾಗಿ ಪರಿವರ್ತಿಸಬೇಕು ಎಂಬ ಸ್ಥಳೀಯ ವರ್ತಕರ ಹಾಗೂ ರೈತರು ಆಗ್ರಹಿಸಿದ್ದಾರೆ.

ಮುಖ್ಯ ಮಾರುಕಟ್ಟೆಯಾದರೆ ಸರ್ಕಾರದ ಅನುದಾನ ನೆರವಾಗಿ ಬರುತ್ತದೆ. ಇದರಿಂದ ಮಾರುಕಟ್ಟೆ ಬೇಗ ಅಭಿವೃದ್ಧಿಯಾಗಿ ತಾಲ್ಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂಬುದು ಬಹುತೇಕ ರೈತರ ನಿರೀಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT