ಶನಿವಾರ, ಸೆಪ್ಟೆಂಬರ್ 18, 2021
30 °C
ಮುಖ್ಯ ಶಿಕ್ಷಕ ಮಾನ್ವಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ಶಾಲೆಗೆ ಬೀಗ: ಐವರು ಶಿಕ್ಷಕರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿ ಅವಧಿಗೆ ಮುಂಚೆಯೇ ಶಾಲೆಗೆ ಬೀಗ ಹಾಕಿ ತೆರಳಿದ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

‘ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲಗೌಡ, ಶಿಕ್ಷಕಿಯರಾದ ಪುಷ್ಪಲತಾ ಎಚ್.ಎನ್, ಅಶ್ವಿನಿ ಎನ್.ಎಚ್, ಗಂಗಮ್ಮ ಇಟಗಿ ಹಾಗೂ ಕಮಲಾಕ್ಷಿ ದಳವಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಶಾಲೆಗೆ ಬೀಗ ಹಾಕಿ ತೆರಳಿದ್ದರು’ ಎಂದು ಸಾಮಾಜಿಕ ಕಾರ್ಯಕರ್ತರಾದ ಅಣ್ಣಪ್ಪ ಮೇಟಿಗೌಡ ಅವರು ಬೀಗ ಹಾಕಿದ ದೃಶ್ಯಗಳನ್ನು ಸೆರೆಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶನಿವಾರ ದೂರು ಸಲ್ಲಿಸಿ ಶಿಸ್ತುಕ್ರಮಕ್ಕೆ ಒತ್ತಾಯಿಸಿದ್ದರು.

ಬಿಇಒ ನೋಟಿಸ್: ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಅವರು ಶಾಲೆಯ ಮುಖ್ಯ ಶಿಕ್ಷಕ ಶ್ರೀಶೈಲಗೌಡ ಹಾಗೂ ಶಿಕ್ಷಕಿಯರಾದ ಪುಷ್ಪಲತಾ ಎಚ್.ಎನ್, ಅಶ್ವಿನಿ ಎನ್.ಎಚ್, ಗಂಗಮ್ಮ ಇಟಗಿ ಹಾಗೂ ಕಮಲಾಕ್ಷಿ ದಳವಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಇಲಾಖೆಯ ಪೂರ್ವಾನುಮತಿ ಇಲ್ಲದೆ ಶಾಲಾ ಅವಧಿಯಲ್ಲಿ ಶಾಲೆಗೆ ಬೀಗ ಹಾಕಿರುವುದು ಕರ್ತವ್ಯ ಲೋಪವಾಗಿದೆ. 3 ದಿನಗಳ ಒಳಗೆ ಲಿಖಿತ ಸಮಜಾಯಿಷಿ ನೀಡಬೇಕು. ಈ ಕುರಿತು ನಿರ್ಲಕ್ಷ್ಯವಹಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.