ಶುಕ್ರವಾರ, ಜನವರಿ 24, 2020
20 °C
ಭಾರತ ಬಂದ್‌ ಬೆಂಬಲಿಸಿ ಜಿಲ್ಲೆಯಾದ್ಯಂತ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ರಾಯಚೂರಿನಲ್ಲಿ ಭಾಗಶಃ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಅಖಿಲ ಭಾರತ ಮುಷ್ಕರ ನಿಮಿತ್ತ ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಅಂಗಡಿಗಳನ್ನು ಬಂದ್ ಮಾಡಿಕೊಂಡು ಬೆಂಬಲ ಸೂಚಿಸಿದ್ದರಿಂದ ಬಂದ್ ಭಾಗಶಃ ಯಶಸ್ವಿಯಾಗಿದೆ.

ಲಿಂಗಸುಗೂರು, ಮಾನ್ವಿ, ದೇವದುರ್ಗ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಮಿಕ ಸಂಘಟನೆಗಳು ರ‍್ಯಾಲಿ ನಡೆಸಿ ಮನವಿ ಸಲ್ಲಿಸಿದವು. ಬಸ್ ಸಂಚಾರ ಎಂದಿನಂತೆ ಇತ್ತು. ಅದರೆ, ಮಧ್ಯಾಹ್ನದವರೆಗೂ ಬಸ್ ನಿಲ್ದಾಣಗಳಲ್ಲಿ ನಿತ್ಯ ಕಾಣುತ್ತಿದ್ದ ಪ್ರಯಾಣಿಕರ ದಟ್ಟಣೆ ಇರಲಿಲ್ಲ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಿಸಿದವು. ಜನಜೀವನ ಸಹಜವಾಗಿತ್ತು. ಪೊಲೀಸರು ಜಿಲ್ಲೆಯಾದ್ಯಂತ ಬಂದೋಬಸ್ತ್ ಏರ್ಪಡಿಸಿದ್ದರು.

ರಾಯಚೂರು ಸುಪರ್‌ ಮಾರ್ಕೆಟ್‌, ಸರಾಫ್‌ ಬಜಾರ್‌, ಕಪಡಾ ಬಜಾರ್‌, ಗಂಜ್‌ ರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳು ಎಂದಿನಂತೆ ತಳ್ಳುಗಾಡಿಗಳನ್ನು ಆರಂಭಿಸಿರಲಿಲ್ಲ. ಮಧ್ಯಾಹ್ನ 12 ರವರೆಗೂ ಸರಾಫ್‌ ಬಜಾರ್‌ ಮಳಿಗೆಗಳು ಬಂದ್‌ ಆಗಿದ್ದವು. ನಿತ್ಯ ಜನದಟ್ಟಣೆ ಇರುತ್ತಿದ್ದ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿಯೂ ಬೆಳಿಗ್ಗೆ ಜನರು ವಿರಳವಾಗಿದ್ದರು.

ಕಾರ್ಮಿಕ ಸಂಘಗಳ ಪ್ರತಿಭಟನೆ: ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ, ಕಾರ್ಮಿಕ ಸಂಘಗಳ ಜಂಟಿ ಸಮಿತಿ ಹಾಗೂ ಟ್ರೇಡ್‌ ಯುನಿಯನ್‌ ಕಾಂಗ್ರೆಸ್‌ ಆಫ್‌ ಇಂಡಿಯಾ (ಟಿಯುಸಿಐ) ಪ್ರತ್ಯೇಕವಾಗಿ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದವು.

ಕಾರ್ಮಿಕ ಸಂಘಗಳ ಜಂಟಿ ಸಮಿತಿ: ಸದಸ್ಯರು ನಗರದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರವು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಭಣಿಸುತ್ತಿದೆ. ಕಾರ್ಮಿಕ ವಿರೋಧಿ ಧೋರಣೆಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬೆಲೆ ಏರಿಕೆ ಹಾಗೂ ಆದಾಯ ಕುಸಿತದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡಿ 44 ರಿಂದ 4 ಕೋಡ್‌ಗಳಿಗೆ ಇಳಿಕೆ ಮಾಡಿ, ಕಾರ್ಮಿಕರ ಹಕ್ಕು ಕಸಿಯಲಾಗಿದೆ ಎಂದು ಆರೋಪಿಸಿದರು.

ವೇತನ ಸಂಹಿತೆ, ವೃತ್ತಿ ಆರೋಗ್ಯ ಸಂರಕ್ಷಣೆ ಸಂಹಿತೆಗಳನ್ನು ಅಂಗೀಕರಿಸಿ ಉದ್ಯೋಗ ಭದ್ರತೆಯನ್ನು ಕಸಿದುಕೊಳ್ಳಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ವೇತನ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

60 ವರ್ಷ ದಾಟಿದ ನಾಗರಿಕರಿಗೆ ₹10 ಸಾವಿರ ಪಿಂಚಣಿ ಕೊಡಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ವಿವಿಧ ಸಂಘಟನೆಯ ಮುಖಂಡರಾದ ಡಿ.ಎಸ್.ಶರಣಬಸವ, ಎನ್.ಎಸ್.ವೀರೇಶ, ಶೈಲರೆಡ್ಡಿ, ವರಲಕ್ಷ್ಮೀ, ಮಹೇಶ್ ಚೀಕಲಪರ್ವಿ, ಕೆ.ಜಿ.ವೀರೇಶ, ಕರಿಯಪ್ಪ, ಸಲಾವುದ್ದೀನ್, ಎಂ.ಶರಣಗೌಡ, ಎಂ.ರವಿ, ಎಚ್.ಪದ್ಮಾ, ತಿಮ್ಮಪ್ಪ ಸ್ವಾಮಿ, ಕುಮಾರ, ಬಸವರಾಜ ಗಾರಲದಿನ್ನಿ, ಪ್ರಾಣೇಶ್, ತಿರುಮಲರಾವ್, ಬಾಬು, ಪ್ರವೀಣರೆಡ್ಡಿ, ಚೆನ್ನಾರೆಡ್ಡಿ,  ತಿಮ್ಮಪ್ಪ, ಶ್ರೀನಿವಾಸ, ಸೇರಿದಂತೆ ಇತರೆ ಕಾರ್ಮಿಕರು ಇದ್ದರು.

ಕರ್ನಾಟಕ ಪ್ರಾಂತ ರೈತ ಸಂಘ: ಡಾ.ಸ್ವಾಮಿನಾಥನ್‌ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ಅಕ್ರಮ, ಸಕ್ರಮ ಸಾಗುವಳಿಗೆದಾರರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಸದಸ್ಯರು ಸ್ಟೇಷನ್‌ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.

ಅಗತ್ಯವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಬರಗಾಲ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆ.ಜಿ.ವೀರೇಶ, ಕರಿಯಪ್ಪ ಅಚ್ಚೊಳ್ಳಿ, ರಂಗಪ್ಪ ಯಾಪಲದಿನ್ನಿ, ಈ.ರಂಗನಗೌಡ ನೇತೃತ್ವ ವಹಿಸಿದ್ದರು.

ಟಿಯುಸಿಐನಿಂದ ರ‍್ಯಾಲಿ: ಭಾರತ ಬಂದ್‌ ಬೆಂಬಲಿಸಿ ಟಿಯುಸಿಐ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸಾರ್ವಜನಿಕ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ರ‍್ಯಾಲಿ ನಡೆಸಿದವು. ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಆರ್‌.ಮಾನಸಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ, ಆರ್‌.ಹುಚ್ಚರೆಡ್ಡಿ, ಶೇಖ್‌ ಹುಷೇನ್‌ ಪಾಷಾ, ರೇಣುಕಮ್ಮ, ಅಜೀಜ್‌ ಜಾಗೀರದಾರ್‌, ರವಿಚಂದ್ರ, ಶಿವಯ್ಯ, ಲಕ್ಷ್ಮೀ, ಎಂ.ಡಿ.ಸರ್ಜಿತ್‌ ಅಮೀದ್‌ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು