ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೈತುಂಬ ಕಾಸು ತಂದ ದಾಳಿಂಬೆ, ಪಪ್ಪಾಯ

ಉತ್ತಮ ಆದಾಯ ನಿರೀಕ್ಷೆ; ತೋಟಗಾರಿಕೆ ಇಲಾಖೆಯಿಂದ ಸಹಾಯಧನ
Last Updated 30 ಜನವರಿ 2022, 3:22 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಹುಡಾ ಗ್ರಾಮದ ಮಲ್ಲಿಕಾರ್ಜುನ ಬೂದಿವಾಳ ಅವರು ಪಪ್ಪಾಯ ಮತ್ತು ದಾಳಿಂಬೆ ಬೆಳೆದು ಯಶಸ್ವಿಯಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆದು ನಷ್ಟ ಅನುಭವಿಸಿ ಬೇಸತ್ತಿದ್ದರು. ಹೀಗಾಗಿ ತೋಟಗಾರಿಕೆ ಬೆಳೆ ಆಯ್ಕೆ ಮಾಡಿಕೊಂಡು ಗೊಬ್ಬರಕಲ್ ಗ್ರಾಮದ ಮಲ್ಲಯ್ಯ ಹಿರೇಮಠ ಅವರ ಪ್ರೇಣೆಯಿಂದ ಕಳೆದ ವರ್ಷ ಪಪ್ಪಾಯ ಮತ್ತು ದಾಳಿಂಬೆ ಸಸಿಗಳನ್ನು ಮಿಶ್ರ ಬೆಳೆಯಾಗಿ ನಾಟಿ ಮಾಡಿದ್ದಾರೆ.

2 ಎಕರೆಯಲ್ಲಿ ಪಪ್ಪಾಯ, 3 ಎಕರೆಯಲ್ಲಿ ದಾಳಿಂಬೆ ಬೆಳೆಯಲಾಗಿದೆ. ಜಮೀನಿನಲ್ಲಿರುವ ಕೊಳವೆಬಾವಿಯಲ್ಲಿ 2 ಇಂಚು ನೀರು ಇರುವುದರಿಂದ ನೀರಿನ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ ಅವರು.

ಹೊಲದ ಸುತ್ತ ತಂತಿ ಬೇಲಿ ಹಾಕಿ ಮಹಾರಾಷ್ಟ್ರದಿಂದ ₹20ಗೆ ಒಂದರಂತೆ ಸಸಿ ತಂದು ನಾಟಿ ಮಾಡಿದ್ದು, ಗುಂಡಿ, ಗೊಬ್ಬರ, ಕ್ರಿಮಿನಾಶಕ ಸೇರಿ ಒಟ್ಟು ₹7 ಲಕ್ಷ ಖರ್ಚಾಗಿದ್ದು, ₹15 ಲಕ್ಷ ಆದಾಯ ಬಂದಿದೆ.

ಅದೇ ರೀತಿ ದಾಳಿಂಬೆ ಸಸಿ ನಾಟಿ ಮಾಡುವುದು, ಗುಂಡಿ, ಕೊಟ್ಟಿಗೆ, ಗೊಬ್ಬರ, ಕಳೆ ತೆಗೆಯುವುದು ಸೇರಿ ₹4.50 ಲಕ್ಷ ಖರ್ಚಾಗಿದ್ದು ಈ ವರ್ಷ ಅತ್ಯಂತ ಸಮೃದ್ಧವಾಗಿ ಬೆಳೆದು ನಿಂತಿದೆ. ಪ್ರತಿ ಎಕರೆಗೆ 5 ಟನ್ ಇಳುವರಿ ನಿರೀಕ್ಷಿಸಿದ್ದು, ಅಂದಾಜು ₹25 ಲಕ್ಷ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ₹5 ಲಕ್ಷ ಖರ್ಚಾದರೂ ₹20 ಲಕ್ಷ ಲಾಭ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುಂಡಿ ತೋಡಲು, ಸಸಿ ನಾಟಿಸಲು ಮತ್ತು ಕೊಟ್ಟಿಗೆ ಗೊಬ್ಬರ ಖರೀದಿಗೆ ಧನಸಹಾಯ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಭತ್ತದ ಬೆಳೆಯಿಂದ ನಷ್ಟವಾಗುತ್ತಿತ್ತು. ಹೀಗಾಗಿ ತೋಟಗಾರಿಕೆ ಬೆಳೆ ಬೆಳೆದ ರೈತರೊಂದಿಗೆ ಚರ್ಚಿಸಿ ಬೆಳೆ ಪದ್ಧತಿಯನ್ನು ಬದಲಾಯಿದೆ ಎನ್ನುತ್ತಾರೆ ಮಲ್ಲಿಕಾರ್ಜುನ ಬೂದಿವಾಳ.

‘ಮಲ್ಲಿಕಾರ್ಜುನ ಅವರಿಗೆ ಒಕ್ಕಲುತನದಲ್ಲಿ ಅತ್ಯಂತ ಆಸಕ್ತಿಯಿದೆ. ಆದ್ದರಿಂದ ಒಂದರಲ್ಲಿ ಹಾನಿಯಾದರೆ ಮತ್ತೊಂದರ ಬಗ್ಗೆ ತಿಳಿದುಕೊಳ್ಳುವ ಮನೋಭಾವ ಹೊಂದಿದ್ದಾರೆ. ಅವರ ಆಸಕ್ತಿಯನ್ನು ಗಮನಿಸಿ ರಾಷ್ಟ್ರೀಯ ತೋಟಗಾರಿಕೆ ವಿಷನ್ ಯೋಜನೆಯಡಿ ₹75 ಸಾವಿರ ಆರ್ಥಿಕ ನೆರವು ನೀಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಟಿ.ನಂದಿಬೇವೂರು
ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಸಿ ನಾಟಿಗೆ ಧನಸಹಾಯ ಒದಗಿಸಲಾಗಿದೆ. ಅಲ್ಲದೆ, ಕೃಷಿ ಹೊಂಡ ತೋಡಿಕೊಳ್ಳಲು ನೆರವು ಒದಗಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿ, ಹಣ್ಣುಗಳನ್ನು ಶೇಖರಿಸಲು ಮತ್ತು ಗ್ರೇಡಿಂಗ್ ಮಾಡಲು ಪ್ಯಾಕ್ ಹೌಸ್ ಕಟ್ಟಿಸಲು ₹2 ಲಕ್ಷ ಆರ್ಥಿಕ ನೆರವು ನೀಡಲಾಗಿದೆ ಎಂದು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT