ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ಸಮುದಾಯಗಳ ಹತ್ತಿಕ್ಕುವ ಹುನ್ನಾರ’

Last Updated 27 ಮೇ 2022, 12:16 IST
ಅಕ್ಷರ ಗಾತ್ರ

ಮಾನ್ವಿ: ‘ರಾಜ್ಯ ಸರ್ಕಾರ ಹಿಂದುಳಿದ ಸಮುದಾಯಗಳ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ ನಡೆಸುವುದು ಸರಿಯಲ್ಲ’ ಎಂದು ಆರ್ಯ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ವ್ಯಾಪ್ತಿಗೆ ಇತರ ಸಮುದಾಯಗಳನ್ನು ಸೇರಿಸುವಾಗ 2ಎ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಇತರ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಇತರ ಎಲ್ಲಾ ಜಾತಿಗಳ ಕುಲಕಸುಬು ಮಾಡಲು ಅವಕಾಶ ಇರುವಂತೆ ಈಡಿಗ ಸಮುದಾಯದ ಮೂಲವೃತ್ತಿಯಾದ ಸೇಂದಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು. 2004ರಲ್ಲಿ ಮಂಗಳೂರು ಹಾಗೂ ಉಡುಪಿ ಹೊರತುಪಡಿಸಿ ರಾಜ್ಯದ ಇತರ ಕಡೆ ಸೇಂದಿ ಮಾರಾಟ ನಿಷೇಧಗೊಳಿಸಿದ ನಂತರ ಈಡಿಗ ಸಮುದಾಯದವರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ರಾಜಕೀಯ ಷಡ್ಯಂತ್ರವೇ ಈಡಿಗ ಸಮುದಾಯದ ಕುಲಕಸುಬು ನಿಷೇಧಕ್ಕೆ ಕಾರಣ’ ಎಂದು ಅವರು ದೂರಿದರು.

‘ಬೇರೆ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಸೇಂದಿ ಮಾರಾಟಕ್ಕೆ ಅವಕಾಶ ನೀಡಬೇಕು. ಈಡಿಗ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 500ಕೋಟಿ ಅನುದಾನ ಮಂಜೂರು ಮಾಡಬೇಕು. ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಆರ್ಯ ಈಡಿಗ ಸಮುದಾಯದ ಹಿತರಕ್ಷಣೆಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 20ರಿಂದ ಕಲಬುರಗಿಯಲ್ಲಿ ಆಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗವುದು. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆರ್ಯ ಈಡಿಗ ಸಮುದಾಯದ ಮುಖಂಡರ ಸಭೆ ಹಾಗೂ ಸಂಘಟನೆ ಮಾಡಲಾಗುತ್ತಿದೆ’ ಎಂದರು.

ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರಗೌಡ, ತಾಲ್ಲೂಕು ಅಧ್ಯಕ್ಷ ಈ.ಕೆ.ಹನುಮಂತ, ಗೌರವಾಧ್ಯಕ್ಷ ಶ್ರೀರಾಮುಲು ನೀರಮಾನ್ವಿ, ಯುವ ಘಟಕದ ಅಧ್ಯಕ್ಷ ವಿನೋದಕುಮಾರ, ಗುರುರಾಜ ಕುರ್ಡಿ,ಅಶೋಕ ಚಾಗಬಾವಿ, ಶ್ರೀಕಾಂತ ಗುತ್ತೇದಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT