ಹಟ್ಟಿ ಚಿನ್ನದ ಗಣಿ: ಸ್ಥಳೀಯ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆ ಬಾರದಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದು, ಮಳೆಗಾಗಿ ವಿವಿಧ ಪೂಜೆಗಳ ಮೊರೆ ಹೋಗಿದ್ದಾರೆ.
ಗುರುಗುಂಟಾ ಹೋಬಳಿ ವ್ಯಾಪ್ತಿಗೆ ಬರುವ ಕೋಠಾ, ಮೇದಿನಾಪುರ, ಆನ್ವರಿ, ನಿಲೋಗಲ್ ಯಲಗಟ್ಟಾ, ರೋಡಲಬಂಡ ತವಗ, ವೀರಾಪುರ ಗ್ರಾಮಗಳಲ್ಲಿ ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಇದರಿಂದ ರೈತರ ಮಕ್ಕಳು ಮಳೆಗಾಗಿ ನಿತ್ಯ ದೇವಸ್ಧಾನಗಳಿಗೆ ತೆರಳಿ ದೇವರಿಗೆ ನೀರಾಭಿಷೇಕ ಮಾಡುತ್ತಿದ್ದಾರೆ.
‘ಮಕ್ಕಳು ಬಿಂದಿಗೆ ಮೂಲಕ ನೀರು ತಂದು ಬುಧವಾರವೂ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿ ದೇವರಿಗೆ ಜಲಾಭಿಷೇಕ ಮಾಡಿದ್ದಾರೆ. ಪಟ್ಟಣದ ಬಹುತೇಕ ಎಲ್ಲ ದೇವಸ್ಥಾನಗಳಿಗೆ ಬಿಂದಿಗೆಯಿಂದ ನೀರು ಹಾಕಲಾಗಿದೆ. ಮಳೆಗಾಗಿ ದೇವಸ್ಧಾನಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿವೆ’ ಎಂದು ಸ್ಥಳೀಯರು ಹೇಳಿದರು.
‘ಮಳೆ ಬಾರದಿದ್ದಾಗ ವರುಣನ ಕೃಪೆಗಾಗಿ ನಾನಾ ರೀತಿಯ ಪೂಜೆಗಳನ್ನು ವಿವಿಧೆಡೆ ಕೈಗೊಳ್ಳಲಾಗುತ್ತದೆ. ಅದರಂತೆ ಮಕ್ಕಳಿಂದ ನೀರು ತಂದು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನೀರು ಸುರಿದು, ಪೂಜೆ ಸಲ್ಲಿಸುವುದೂ ಒಂದು ಸಂಪ್ರದಾಯ’ ಎಂದು ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ತಿಳಿಸಿದರು.