ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಗೆ ಆದ್ಯತೆ ಎಂಬುದು ಬಿಜೆಪಿ ಅಧ್ಯಕ್ಷರ ವೈಯಕ್ತಿಕ ವಿಚಾರ: ಜೋಶಿ

Published 12 ಜನವರಿ 2024, 16:28 IST
Last Updated 12 ಜನವರಿ 2024, 16:28 IST
ಅಕ್ಷರ ಗಾತ್ರ

ರಾಯಚೂರು: ‘ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎನ್ನುವುದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ವೈಯಕ್ತಿಕ ವಿಚಾರ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ನಿನ್ನೆ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಟಿಕೆಟ್‌ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯ ಘಟಕದ ಅಧ್ಯಕ್ಷರು ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ’ ಎಂದು ದೇವದುರ್ಗದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಅಧ್ಯಕ್ಷರು ವೈಯಕ್ತಿಕವಾಗಿ ಮಾಹಿತಿ ಸಂಗ್ರಹಿಸಿದ ಆಧಾರದ ಮೇಲೆ ಯಾರ ಪರ, ವಿರೋಧ ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ ಸಂಗತಿ’ ಎಂದರು.

‘ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಸೋಮನಾಥ ಮಂದಿರ ಉದ್ಘಾಟನೆ ಸಂದರ್ಭದಲ್ಲೂ ಗೊಂದಲ ಸೃಷ್ಟಿಸಲು ಪ್ರಯತ್ನಿಸಿತ್ತು. ಕಾಂಗ್ರೆಸ್ ಪಕ್ಷ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಭಾವಿಸಿದೆ. ಅಂತೆಯೇ ಕರ ಸೇವಕರ ವಿರುದ್ಧ ಪ್ರಕರಣ ದಾಖಲಿಸಿದೆ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ’ ಎಂದು ಟೀಕಿಸಿದರು.

‘ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ನಿರಾಕರಿಸಿರುವ ವಿಚಾರದಲ್ಲೂ ಕಾಂಗ್ರೆಸ್‌ ವಿರೋಧಿಸುತ್ತಿರುವುದು ಸರಿಯಲ್ಲ. ಒಂದು ವರ್ಷ ಬಿಟ್ಟು ಇನ್ನೊಂದು ವರ್ಷ ಅವಕಾಶ ಕಲ್ಪಿಸುವ ಪದ್ಧತಿಯನ್ನು ರೂಢಿಸಿಕೊಂಡು ಬರಲಾಗಿದೆ. 2006ರಲ್ಲಿಯೂ ಹೀಗೆಯೇ ಆಗಿತ್ತು. ಆಗ ಕಾಂಗ್ರೆಸ್‌ ಆಡಳಿತ ಇತ್ತು. ಆಗ ಇವರಿಗೆ ಕನ್ನಡದ ಸ್ವಾಭಿಮಾನ ನೆನಪಾಗಲಿಲ್ಲವೆ’ ಎಂದು ಪ್ರಶ್ನಿಸಿದರು.

‘ಕರ್ನಾಟಕಕ್ಕೆ 14 ವರ್ಷಗಳಲ್ಲಿ 10 ಬಾರಿ ಅವಕಾಶ ಸಿಕ್ಕಿದೆ. ಬಿಜೆಪಿ ಸರ್ಕಾರವೇ ಅತಿಹೆಚ್ಚು ಬಾರಿ ಅವಕಾಶ ಕೊಟ್ಟಿದೆ. ಪ್ರತಿಯೊಂದಕ್ಕೂ ಚಿಲ್ಲರೆ ರಾಜಕಾರಣ ಮಾಡುವುದು ಸರಿಯಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT